ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಸಮೀಪದ ಮಳಲಿಯಲ್ಲಿರುವ ಮಸೀದಿ ಬಗೆಗಿನ ವಿವಾದಕ್ಕೆ(Malali Masjid Row) ಸಂಬಂಧಿಸಿದಂತೆ ಮಂಗಳೂರು(Mangaluru) ಸಿವಿಲ್ ಕೋರ್ಟ್ ನವೆಂಬರ್ 9ಕ್ಕೆ ಆದೇಶ ಪ್ರಕಟಿಸಲಿದೆ.
ಮಸೀದಿಯಲ್ಲಿ ಕಾಮಗಾರಿ ನಡೆಸಬಾರದು. ಕೋರ್ಟ್ ಕಮೀಷನರ್ ಮೂಲಕ ಸರ್ವೇ ನಡೆಸುವಂತೆ ವಿಎಚ್‌ಪಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ತೀರ್ಪು ಪ್ರಕಟಿಸಬೇಕಿತ್ತು. ಆದರೆ ಮೂಲ ದಾವೆ ಆಲಿಸಲು ವಿಚಾರಣಾಧೀನ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಕುರಿತು ತೀರ್ಪು ಬರಬೇಕಾದ ಹಿನ್ನೆಲೆಯಲ್ಲಿ ಆದೇಶವನ್ನು ನ.9ಕ್ಕೆ ಮುಂದೂಡಿದೆ. ಇದನ್ನೂ ಓದಿ: ಕೊಹ್ಲಿ ಮ್ಯಾಜಿಕ್ ಫೀಲ್ಡಿಂಗ್, ಶಮಿ ಮಾರಕ ಬೌಲಿಂಗ್ – ಭಾರತಕ್ಕೆ 6 ರನ್‌ಗಳ ರೋಚಕ ಜಯ
ಏನಿದು ವಿವಾದ?
ಮಂಗಳೂರಿನ ಹೊರವಲಯದ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ಹಿಂದೂ ದೇವಸ್ಥಾನದ ಶೈಲಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಸಾಕಷ್ಟು ಚರ್ಚೆ ಆರಂಭಗೊಂಡಿದೆ. ಎಪ್ರಿಲ್ 21 ರಂದು ಈ ದರ್ಗಾವನ್ನು ನವೀಕರಣಗೊಳಿಸೋದಕ್ಕಾಗಿ ಎದುರಿನ ಭಾಗವನ್ನು ನೆಲ ಸಮಗೊಳಿಸಲಾಗಿತ್ತು. ಈ ವೇಳೆ ದರ್ಗಾದ ಒಳ ಭಾಗದಲ್ಲಿ ದೇವಸ್ಥಾನದಲ್ಲಿರುವಂತಹ ಗುಡಿಯ ಶೈಲಿ, ಕಂಬಗಳು, ತೋಮರ, ಬಾಗಿಲುಗಳು ಪತ್ತೆಯಾಗಿತ್ತು. ಹೀಗಾಗಿ ಇದು ಜೈನ ಅಥವಾ ಹಿಂದೂ ದೇವಸ್ಥಾನ ಆಗಿರೋ ಸಾಧ್ಯತೆ ಇದೆ ಎಂದು ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಿಲು ಏರಿತ್ತು.
ಈ ವಿವಾದ ಮಧ್ಯೆ ವಿಹೆಚ್‌ಪಿ ತಾಂಬೂಲ ಪ್ರಶ್ನೆ ಇಟ್ಟಿತ್ತು. ಈ ತಾಂಬೂಲ ಪ್ರಶ್ನೆಯಲ್ಲಿ ವೀರಶೈವ, ಲಿಂಗಾಯತರ ಭೂಮಿಯು ಶೈವ ಸಂಕಲ್ಪ ಆರಾಧನ ಸ್ಥಳವಾಗಿತ್ತು. ಅಲ್ಲೊಂದು ಮಠ ಇತ್ತು. ಜೊತೆಗೆ ಶಿವನ ದೇಗುಲವಿತ್ತು. ಅಲ್ಲಿ ದೇವರ ಆರಾಧನೆ, ಪೂಜೆ ನಡೆಯುತ್ತಿತ್ತು. ದೈವ ಸಾನಿಧ್ಯ ಇದ್ದ ಭೂಮಿ ಎಂಬುದಕ್ಕೆ ಸಂಶಯ ಇಲ್ಲ ಎಂಬ ಸುಳಿವು ತಾಂಬೂಲ ಪ್ರಶ್ನೆಯಲ್ಲಿ ಸಿಕ್ಕಿತ್ತು.