– ತಜ್ಞರಿಂದ ಆತಂಕಕಾರಿ ವಿಚಾರ ಬಹಿರಂಗ
ಪ್ರತಿಯೊಬ್ಬರಲ್ಲೂ ಸೌಂದರ್ಯ ಪ್ರಜ್ಞೆ ಇರುತ್ತದೆ. ನೋಡುವವರ ಮುಂದೆ ನಾನು ಚೆನ್ನಾಗಿ ಕಾಣಬೇಕು. ಅವರಿಗಿಂತ ಇನ್ನೂ ಸುಂದರವಾಗಿ ಕಾಣ್ಬೇಕು ಅಂತ ಬಯಸುವವರೇ ಹೆಚ್ಚು. ಅದಕ್ಕಾಗಿ ಆಧುನಿಕ ಕಾಲದ ಸೌಂದರ್ಯವರ್ಧಕಗಳ ಮೊರೆ ಹೋಗುತ್ತಾರೆ. ಬಗೆಬಗೆಯ ಹೊಸ ಟ್ರೆಂಡ್‌ನ ಮೇಕಪ್‌ಗೆ ದಾಸರಾಗದೇ ಇರುವವರೇ ಇಲ್ಲ. ಮೇಕಪ್ ಮಾಡಿಕೊಳ್ಳದೇ ಜನ ಮನೆಯಿಂದ ಹೊರಗಡೆ ಕಾಲಿಡುವುದೇ ಸವಾಲೆನಿಸಿದೆ. ಅಷ್ಟರಮಟ್ಟಿಗೆ ಈಗಿನ ಕಾಲದ ಜನ ಸೌಂದರ್ಯವರ್ಧಕವನ್ನು ತಮ್ಮ ಬದುಕಿನ ಭಾಗವನ್ನಾಗಿಸಿಕೊಂಡಿದ್ದಾರೆ.
ಅತಿಯಾದ ಮೇಕಪ್ ಛಾಳಿಯು ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ. ಸೌಂದರ್ಯ ಪ್ರಜ್ಞೆ ಮಹಿಳೆಯರಲ್ಲೇ ಹೆಚ್ಚು. ಮೇಕಪ್‌ಗೆ ಹೆಚ್ಚಿನ ಆದ್ಯತೆ ಕೊಡುವವರೂ ಅವರೇ. ಅತಿಯಾದ ಮೇಕಪ್ ಹವ್ಯಾಸವು ಹೆಣ್ಣುಮಕ್ಕಳ ಹಾರ್ಮೋನ್ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ತಮ್ಮ ಸಂಶೋಧನೆ ಮೂಲಕ ಆತಂಕಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ನಗದು, ಟಾರ್ಚ್, ವೈದ್ಯಕೀಯ ಕಿಟ್ ಕೈಲ್ಲಿಟ್ಟುಕೊಳ್ಳಿ – ನಾಳೆ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಹೇಗಿರಲಿದೆ?
ಏನಿದು ಹಾರ್ಮೋನ್?
ಹಾರ್ಮೋನ್ ಎನ್ನುವುದು ವಿಶೇಷ ಕೋಶಗಳಿಂದ ತಯಾರಿಸಲ್ಪಟ್ಟ ರಾಸಾಯನಿಕವಾಗಿದೆ. ಸಾಮಾನ್ಯವಾಗಿ ಅಂತಃಸ್ರಾವಕ ಗ್ರಂಥಿಯೊಳಗೆ ಮತ್ತು ದೇಹದ ಇನ್ನೊಂದು ಭಾಗಕ್ಕೆ ಸಂದೇಶವನ್ನು ಕಳುಹಿಸಲು ರಕ್ತಪ್ರವಾಹಕ್ಕೆ ಬಿಡುಗಡೆಯಾಗುತ್ತದೆ. ಇದನ್ನು ‘ರಾಸಾಯನಿಕ ಸಂದೇಶವಾಹಕ’ ಎಂದು ಕರೆಯಲಾಗುತ್ತದೆ.
ಹಾರ್ಮೋನ್‌ಗಳ ಪ್ರಯೋಜನ ಏನು?
ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲು ಮತ್ತು ಉತ್ತಮ ಆರೋಗ್ಯಕ್ಕೆ ಹಾರ್ಮೋನುಗಳ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಗತ್ಯ. ಸಮತೋಲಿತ ಹಾರ್ಮೋನುಗಳು ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಹಕಾರಿಯಾಗಿರುತ್ತವೆ. ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತವೆ. ಮೂಳೆಯ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ. ಮಾನಸಿಕತೆಯನ್ನು ನಿಯಂತ್ರಿಸುತ್ತವೆ. ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುತ್ತವೆ. ಹಲವಾರು ಅಂಶಗಳು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು. ಪ್ರೌಢಾವಸ್ಥೆ, ಗರ್ಭಧಾರಣೆ, ಹಾಲುಣಿಸುವಿಕೆ ಮತ್ತು ಋತುಬಂಧದ ಸಮಯದಲ್ಲಿ ಹಾರ್ಮೋನುಗಳು ಸ್ವಾಭಾವಿಕವಾಗಿ ಏರಿಳಿತಗೊಂಡರೂ, ಕೆಲವು ಅಸಹಜ ಏರಿಳಿತಗಳು ಗಂಭೀರ ಆರೋಗ್ಯ ಸ್ಥಿತಿಗಳಿಗೆ ಕಾರಣವಾಗಬಹುದು. ಇದನ್ನೂ ಓದಿ: ಅಭಿಮಾನಿ ಕಡೆ ಗನ್ ಇಟ್ಟ ದಳಪತಿ ವಿಜಯ್ ಬಾಡಿಗಾರ್ಡ್!
ದೇಹದಲ್ಲಿ ಕೆಲವು ಹಾರ್ಮೋನುಗಳ ಅಧಿಕ ಅಥವಾ ಕೊರತೆಯಿದ್ದಾಗ ಹಾರ್ಮೋನುಗಳ ಏರಿಳಿತ ಉಂಟಾಗುತ್ತದೆ. ಇದನ್ನು ನಿಯಂತ್ರಿಸದಿದ್ದರೆ, ಹಾರ್ಮೋನುಗಳ ಅಸಮತೋಲನವು ಪಿಸಿಓಎಸ್, ಥೈರಾಯ್ಡ್ ಸಮಸ್ಯೆಗಳು, ಬಂಜೆತನ, ಮನಸ್ಥಿತಿ ಬದಲಾವಣೆಗಳು, ತೂಕ ಹೆಚ್ಚಾಗುವುದು, ನಿದ್ರೆಯ ತೊಂದರೆಗಳು, ಚರ್ಮ ಮತ್ತು ಕೂದಲಿನ ಬದಲಾವಣೆಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಕಳಪೆ ಆಹಾರ ಮತ್ತು ಅನಾರೋಗ್ಯಕರ ಜೀವನಶೈಲಿ ಮಹಿಳೆಯರಲ್ಲಿ ಹಾರ್ಮೋನುಗಳ ಏರಿಳಿತಕ್ಕೆ ಕಾರಣವಾಗಬಹುದು. ಸ್ತ್ರೀರೋಗತಜ್ಞೆ ಡಾ. ಅಂಜಲಿ ಕುಮಾರ್, ಮಹಿಳೆಯರಲ್ಲಿ ಹಾರ್ಮೋನುಗಳ ಏರಿಳಿತಕ್ಕೆ ಪ್ರಮುಖ ಕಾರಣವೊಂದನ್ನು ಬಹಿರಂಗಪಡಿಸಿದ್ದಾರೆ. ವಾಟರ್‌ಪ್ರೂಫ್ (ಜಲನಿರೋಧಕ), ಸ್ಮಡ್ಜೆ-ಪ್ರೂಫ್ (ಕಲೆನಿರೋಧಕ) ಮೇಕಪ್ ಉತ್ಪನ್ನಗಳು ಹಾರ್ಮೋನ್‌ಗಳ ಇಮ್‌ಬ್ಯಾಲೆನ್ಸ್ಗೆ ಪ್ರಮುಖವಾದ ಒಂದು ಕಾರಣ ಎಂದು ತಿಳಿಸಿದ್ದಾರೆ.
ಮೇಕಪ್ ಉತ್ಪನ್ನಗಳಿಂದ ಹಾರ್ಮೋನ್ ಮೇಲಿನ ಎಫೆಕ್ಟ್ ಏನು?
ವಾಟರ್‌ಪ್ರೂಫ್ ಮಸ್ಕರಾ ಮಹಿಳೆಯರ ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ, ಕಲೆನಿರೋಧ ಲಿಪ್‌ಸ್ಟಿಕ್‌ಗಳು ಮತ್ತು 24 ಗಂಟೆಗಳ ಸ್ಟೇ ಮೇಕಪ್ ಕೂಡ ನೇರವಾಗಿ ಎಫೆಕ್ಟ್ ಉಂಟುಮಾಡಲಿದೆ ಎಂದು ತಜ್ಞರು ತಿಳಿಸಿದ್ದಾರೆ. ‘ನಾವು ದಿನನಿತ್ಯ ಮಹಿಳೆಯರು ಹಾರ್ಮೋನ್ ಏರುಪೇರಿನಿಂದ ಬಳಲುತ್ತಿರುವುದನ್ನು ನೋಡುತ್ತೇವೆ. ಈ ಸಮಸ್ಯೆಗೆ ಮೂಲ ಕಾರಣ ತಮ್ಮ ವ್ಯಾನಿಟಿ ಬ್ಯಾಗ್‌ಗಳಲ್ಲಿರುವ ಮೇಕಪ್ ವಸ್ತುಗಳಿಂದ ಎಂದು ಅವರು ಯೋಚಿಸುವುದೇ ಇಲ್ಲ. ಅನೇಕ ದೀರ್ಘಕಾಲೀನ ಮೇಕಪ್ ಉತ್ಪನ್ನಗಳು ಅಂತಃಸ್ರಾವಕಕ್ಕೆ ಅಡ್ಡಿಪಡಿಸುವ ರಾಸಾಯನಿಕಗಳಿಂದ ತುಂಬಿರುತ್ತವೆ. ಇವು ನಿಮ್ಮ ದೇಹದ ನೈಸರ್ಗಿಕ ಹಾರ್ಮೋನುಗಳನ್ನು ನಿರ್ಬಂಧಿಸುವ ಸಂಯುಕ್ತಗಳಾಗಿವೆ. ಇದು ನಿಮ್ಮ ಹಾರ್ಮೋನ್ ವ್ಯವಸ್ಥೆಯನ್ನೇ ಏರುಪೇರಾಗಿಸಲಿದೆ’ ಎಂದು ಡಾ. ಅಂಜಲಿ ಅವರು ಹೇಳುತ್ತಾರೆ. ಇದನ್ನೂ ಓದಿ: ಬೇಬಿ ಬಂಪ್‌ನೊಂದಿಗೆ ‘ಮೆಟ್ ಗಾಲಾ’ದಲ್ಲಿ ಹೆಜ್ಜೆ ಹಾಕಿದ ಕಿಯಾರಾ ಅಡ್ವಾಣಿ
ಹಾರ್ವರ್ಡ್ ಪಬ್ಲಿಕ್ ಹೆಲ್ತ್ ಸಂಶೋಧನೆ ಏನು ಹೇಳುತ್ತೆ?
231 ಕಾಸ್ಮೆಟಿಕ್ ಉತ್ಪನ್ನಗಳನ್ನು ಸಂಶೋಧನೆಯಲ್ಲಿ ವಿಶ್ಲೇಷಿಸಲಾಗಿದೆ. ಮುಕ್ಕಾಲು ಭಾಗದಷ್ಟು ಜಲನಿರೋಧಕ ಮಸ್ಕರಾಗಳು PFA ಗಳ ಉಪಸ್ಥಿತಿಯನ್ನು ಸೂಚಿಸುವ ಹೆಚ್ಚಿನ ಫ್ಲೋರಿನ್ ಸಾಂದ್ರತೆಯನ್ನು ಹೊಂದಿರುತ್ತವೆ ಎಂದು ಅಧ್ಯಯನ ಬಹಿರಂಗಪಡಿಸಿದೆ. ದ್ರವ ಲಿಪ್‌ಸ್ಟಿಕ್‌ಗಳಲ್ಲಿ ಮೂರನೇ ಎರಡರಷ್ಟು PFA ನೊಂದಿಗೆ ಹೆಚ್ಚಿನ ಫ್ಲೋರಿನ್ ಮಟ್ಟ ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ.
ಆರೋಗ್ಯದ ಮೇಲೆ ಎಫೆಕ್ಟ್ ಏನು?
ಈ ಉತ್ಪನ್ನಗಳು ಈಸ್ಟ್ರೊಜೆನ್ ಅನ್ನು ಅನುಕರಿಸುತ್ತವೆ. ಟೆಸ್ಟೋಸ್ಟೆರಾನ್ ಅನ್ನು ಅಡ್ಡಿಪಡಿಸುತ್ತವೆ. ಥೈರಾಯ್ಡ್ ಹಾರ್ಮೋನ್‌ಗೆ ಘಾಸಿಗೊಳಿಸುತ್ತವೆ. ಇದು ಪಿಸಿಓಎಸ್ ಉಲ್ಬಣ, ಅನಿಯಮಿತ ಮುಟ್ಟು, ಫಲವಂತಿಕೆ ಸಮಸ್ಯೆಗಳಿಗೆ ಕಾರಣವಾಗಬಹುದು. ಮುಖ್ಯವಾಗಿ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.
ದೀರ್ಘಕಾಲ ಬಾಳಿಕೆ ಬರುವ ಮೇಕಪ್ ಉತ್ಪನ್ನಗಳಲ್ಲಿ PFAS (ಪರ್- ಮತ್ತು ಪಾಲಿಫ್ಲೋರೋಆಲ್ಕೈಲ್ ವಸ್ತುಗಳು), ಪ್ಯಾರಾಬೆನ್‌ಗಳು, ಥಾಲೇಟ್‌ಗಳು, ಟ್ರೈಕ್ಲೋಸನ್ ಮತ್ತು ಸಂಶ್ಲೇಷಿತ ಸುಗಂಧ ದ್ರವ್ಯಗಳು ಪ್ರಮುಖ ಅಪರಾಧಿಗಳಾಗಿವೆ. ನಿತ್ಯ ಮೇಕಪ್ ಮಾಡುವುದರಿಂದ ಕಾಲಾನಂತರದಲ್ಲಿ ಹಾರ್ಮೋನುಗಳ ಏರಿಳಿತ, ಹದಗೆಡುತ್ತಿರುವ PCOS ಲಕ್ಷಣಗಳು, ಅನಿಯಮಿತ ಋತುಚಕ್ರ, ಫಲವಂತಿಕೆ ಸವಾಲುಗಳು ಮತ್ತು ಥೈರಾಯ್ಡ್ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಮಹಿಳೆಯರು ಚರ್ಮದ ಮೇಲೆ ಹಚ್ಚಿಕೊಳ್ಳುವ ಮೇಕಪ್ ದೇಹದೊಳಗೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯಬೇಕು. ಇಂತಹ ಹವ್ಯಾಸಗಳನ್ನು ಆದಷ್ಟು ತಪ್ಪಿಸಲು ಪ್ರಯತ್ನಿಸಬೇಕು. ರಾಸಾಯನಿಕಗಳಿಲ್ಲದ ನೈಸರ್ಗಿಕ ಉತ್ಪನ್ನಗಳನ್ನು ಬಳಸಲು ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 1971ರ ನಂತರ ನಾಳೆ ದೇಶದಲ್ಲಿ ಯುದ್ಧದ ಡ್ರಿಲ್! – ಮಾಕ್ ಡ್ರಿಲ್ ಹೇಗಿರಲಿದೆ?
ಹಾರ್ಮೋನ್‌ಗಳ ಸಮತೋಲನಕ್ಕೆ ಹೀಗೆ ಮಾಡಿ..
* ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಡಿಮೆ ಕೊಬ್ಬಿನ ಪ್ರೊಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ.
* ಹಾರ್ಮೋನುಗಳನ್ನು ನೈಸರ್ಗಿಕವಾಗಿ ಸಮತೋಲನಗೊಳಿಸಲು ದೈಹಿಕವಾಗಿ ಸಕ್ರಿಯರಾಗಿರಿ.
* ದೀರ್ಘಕಾಲದ ಒತ್ತಡವು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು. ಒತ್ತಡ ನಿರ್ವಹಣಾ ತಂತ್ರಗಳನ್ನು ಅನುಸರಿಸಿ
* ಹಾರ್ಮೋನುಗಳ ಸಮತೋಲನಕ್ಕೆ ನಿದ್ರೆಗೆ ಆದ್ಯತೆ ನೀಡುವುದು ಅತ್ಯಗತ್ಯ. 7-9 ಗಂಟೆಗಳ ಉತ್ತಮ ನಿದ್ರೆಯ ಕ್ರಮ ಅನುಸರಿಸಿ.
ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವುದರಿಂದ ಒಟ್ಟಾರೆ ಆರೋಗ್ಯಕ್ಕೆ ಹಾರ್ಮೋನುಗಳ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಗತ್ಯ. ಮಹಿಳೆಯರು ಹಾರ್ಮೋನುಗಳ ಸಮತೋಲನವನ್ನು ಸಾಧಿಸಲು ಮತ್ತು ನಿರ್ವಹಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ ತಜ್ಞ ವೈದ್ಯರು.