ಸಿಹಿ ಸಿಹಿ ನೆಲ್ಲಿಕಾಯಿ ಮುರಬ್ಬಾ ಈ ರೀತಿ ಮಾಡಿ

Public TV
2 Min Read
Amla Murabba 1

ಸಿಹಿ ಸಿಹಿ ನೆಲ್ಲಿಕಾಯಿಯ ಮುರಬ್ಬಾ ರಾಜಸ್ಥಾನದ ಸಾಂಪ್ರದಾಯಿಕ ರೆಸಿಪಿ. ಆಮ್ಲಾ ಮುರಬ್ಬಾ ಎನ್ನಲಾಗುವ ಇದನ್ನು ಯಾವಾಗ ಬೇಕೆನಿಸಿದರೂ ಒಂದು ಚಮಚದಷ್ಟು ಸವಿಯಬಹುದು. ಊಟದೊಂದಿಗೂ ಇದು ಸಖತ್ತಾಗಿರುತ್ತದೆ. ಇದನ್ನು ತಯಾರಿಸಲು ಸ್ವಲ್ಪ ಹೆಚ್ಚಿನ ತಾಳ್ಮೆ ಬೇಕು. ಆದರೆ ಮಾಡುವ ವಿಧಾನ ತುಂಬಾ ಸಿಂಪಲ್ ಆಗಿದೆ. ಸಿಹಿ ಸಿಹಿ ನೆಲ್ಲಿಕಾಯಿ ಮುರಬ್ಬಾ ಮಾಡೋದು ಹೇಗೆಂದು ನೋಡೋಣ.

Amla Murabba 2

ಬೇಕಾಗುವ ಪದಾರ್ಥಗಳು:
ನೆಲ್ಲಿಕಾಯಿ – 20
ಸಕ್ಕರೆ – ಎರಡೂವರೆ ಕಪ್
ಏಲಕ್ಕಿ ಪುಡಿ – ಕಾಲು ಟೀಸ್ಪೂನ್
ಕೇಸರಿ ಎಳೆ – ಚಿಟಿಕೆ

ಮಾಡುವ ವಿಧಾನ:
* ಮೊದಲಿಗೆ ಒಂದು ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಸಾಕಷ್ಟು ನೀರು ಹಾಕಿ ಶುಚಿಗೊಳಿಸಿದ ನೆಲ್ಲಿಕಾಯಿಗಳನ್ನು ಅದರಲ್ಲಿ ಹಾಕಿ ಸುಮಾರು 10 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಕುದಿಸಿಕೊಳ್ಳಿ.
* ಬಳಿಕ ನೀರನ್ನು ಬಸಿದು ಪಕ್ಕಕ್ಕಿಡಿ.
* ಈಗ ಒಂದು ನಾನ್‌ಸ್ಟಿಕ್ ಪ್ಯಾನ್ ತೆಗೆದುಕೊಂಡು ಅದಕ್ಕೆ ಸಕ್ಕರೆ ಹಾಗೂ 3 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮಧ್ಯಮ ಉರಿಯಲ್ಲಿ ಸುಮಾರು 8 ನಿಮಿಷಗಳ ಕಾಲ ಆಗಾಗ ಕೈಯಾಡಿಸುತ್ತಾ ಕುದಿಸಿಕೊಳ್ಳಿ. ಇದನ್ನೂ ಓದಿ: ಸಿಹಿಯಾದ ಶುಂಠಿ ಬರ್ಫಿ ಸವಿದು ಆನಂದಿಸಿ

Amla Murabba

* ಬಳಿಕ ನೆಲ್ಲಿಕಾಯಿಗಳನ್ನು ಅದರಲ್ಲಿ ಹಾಕಿ ಮಿಶ್ರಣ ಮಾಡಿ ಹಾಗೂ ಕಡಿಮೆ ಉರಿಯಲ್ಲಿ ಸುಮಾರು 30 ನಿಮಿಷ ಬೇಯಿಸಿಕೊಳ್ಳಿ. ನೆಲ್ಲಿಕಾಯಿ ಮೆತ್ತಗಾಗುವವರೆಗೆ ಆಗಾಗ ಕೈಯಾಡಿಸುತ್ತಾ ಬೇಯಿಸಿ.
* ಈಗ ಪಾತ್ರೆಗೆ ಮುಚ್ಚಳ ಮುಚ್ಚಿ, ಸುಮಾರು 2 ದಿನಗಳ ವರೆಗೆ ಹಾಗೇ ಬಿಡಿ.
* ಈಗ ಸಕ್ಕರೆ ಪಾಕ ಹಾಗೂ ನೆಲ್ಲಿಕಾಯಿಗಳನ್ನು ಬೇರ್ಪಡಿಸಿ, ಎರಡನ್ನೂ ಬೇರೆ ಬೇರೆ ಪಾತ್ರೆಯಲ್ಲಿ ಸಂಗ್ರಹಿಸಿ.
* ಸಕ್ಕರೆ ಪಾಕವನ್ನು ನಾನ್‌ಸ್ಟಿಕ್ ಪ್ಯಾನ್‌ಗೆ ಹಾಕಿ, ಅದಕ್ಕೆ ಏಲಕ್ಕಿ ಪುಡಿ ಹಾಗೂ ಕೇಸರಿ ಎಳೆಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಹೆಚ್ಚಿನ ಉರಿಯಲ್ಲಿ ಸುಮಾರು 8 ನಿಮಿಷ ಆಗಾಗ ಕೈಯಾಡಿಸುತ್ತಾ ಬೇಯಿಸಿಕೊಳ್ಳಿ.
* ಈಗ ಬೇರ್ಪಡಿಸಿಟ್ಟಿದ್ದ ನೆಲ್ಲಿಕಾಯಿಗಳನ್ನು ಅದಕ್ಕೆ ಸೇರಿಸಿ, ಮಧ್ಯಮ ಉರಿಯಲ್ಲಿ ಸುಮಾರು 5 ನಿಮಿಷ ಬೇಯಿಸಿ.
* ಈಗ ಅದನ್ನು ತಣ್ಣಗಾಗಲು ಬಿಡಿ. ಬಳಿಕ ಗಾಜಿನ ಬಾಟಲಿಯಲ್ಲಿ ಶೇಖರಿಸಿಡಿ.
* ಇದೀಗ ಸಿಹಿ ಸಿಹಿ ಮುರಬ್ಬಾ ಸವಿಯಲು ಸಿದ್ಧವಾಗಿದ್ದು, ಬೇಕೆನಿಸಿದಾಗ ಚಪ್ಪರಿಸಬಹುದು. ಇದನ್ನೂ ಓದಿ: ಸವಿಯಿರಿ ಆರೋಗ್ಯಕರ ಬಾಳೆಹಣ್ಣಿನ ಖೀರ್

Web Stories

Share This Article