ಸಾಮಾನ್ಯವಾಗಿ ಉತ್ತರ ಕರ್ನಾಟಕದ (North Karnataka) ಕೆಲವು ತಿನಿಸುಗಳನ್ನು ಮಾಡುವುದು ತುಂಬಾ ಸುಲಭ. ಮಾಡುವುದು ಸುಲಭವಾದರೂ ವೇಗವಾಗಿ ಜನರನ್ನು ಆಕರ್ಷಿಸುತ್ತವೆ. ಈ ರೀತಿಯಾಗಿ ಜನರನ್ನು ಬಲು ಆಕರ್ಷಿಸಿದ ತಿನಿಸುಗಳಲ್ಲಿ ಇದು ಒಂದು. ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಮಾಡುವುದು ಹೆಚ್ಚು. ಈ ಜೋಳದ ರೊಟ್ಟಿ ಮಾಡುವಾಗ ವಿಭಿನ್ನವಾಗಿ ಈ ಮುಟಿಗಿಯನ್ನು ಮಾಡಲು ಪ್ರಾರಂಭಿಸಿದರು. ಹೀಗೆ ಶುರುವಾದ ಮುಟಿಗಿ ಇಂದಿಗೂ ತುಂಬಾ ಹೆಸರು ಮಾಡಿದೆ. ಒಂದೊಂದು ಕಡೆ ಒಂದೊಂದು ರೀತಿಯಾಗಿ ಈ ಮುಟಿಗಿಯನ್ನು ಮಾಡುತ್ತಾರೆ. ಕೆಲವರು ಮುಟಿಗಿಯನ್ನು ಸರಳ ವಿಧಾನ ಅನುಸರಿಸಿ ಮಾಡಿದರೆ, ಇನ್ನೂ ಕೆಲವರು ಮಾಡುವ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ.
ಬೇಕಾಗುವ ಸಾಮಗ್ರಿಗಳು:
ಜೋಳದ ಹಿಟ್ಟು
ಉಪ್ಪು
ಎಣ್ಣೆ
ಬೆಳ್ಳುಳ್ಳಿ
ಮಾಡುವ ವಿಧಾನ:
ಮೊದಲಿಗೆ ಜೋಳದ ಹಿಟ್ಟನ್ನು ಬಿಸಿ ನೀರಿನೊಂದಿಗೆ ರೊಟ್ಟಿ ಮಾಡುವ ಹದಕ್ಕೆ ಕಲಸಿಕೊಳ್ಳಬೇಕು. ಬಳಿಕ ರೊಟ್ಟಿಯನ್ನು ತಟ್ಟಿಕೊಂಡು ಬೇಯಿಸಿಕೊಳ್ಳಬೇಕು. ಆನಂತರ ಬಿಸಿ ರೊಟ್ಟಿಯನ್ನು ತಟ್ಟೆಯಂತೆ ಹಿಡಿದು ಅದಕ್ಕೆ ಎಣ್ಣೆ, ಜಜ್ಜಿದ ಬೆಳ್ಳುಳ್ಳಿ ಹಾಗೂ ಸ್ವಲ್ಪ ಉಪ್ಪು ಹಾಕಿಕೊಳ್ಳಬೇಕು. ಎಲ್ಲ ಹಾಕಿದ ನಂತರ ರೊಟ್ಟಿಯನ್ನು ಮಡಚಿಕೊಂಡು ಅದರ ಮೇಲೆ ಕುಟ್ಟುವ ಕಲ್ಲಿನಿಂದ ಜಜ್ಜಿಕೊಳ್ಳಬೇಕು. ನಂತರ ರೊಟ್ಟಿ ಸ್ವಲ್ಪ ಸಣ್ಣಗಾದ ಮೇಲೆ ಅದನ್ನ ಉಂಡೆ ರೀತಿ ಕಟ್ಟಿಕೊಳ್ಳಬೇಕು. ಆಗ ಮುಟಿಗಿ ತಯಾರಾಗುತ್ತದೆ. ಮುಟಿಗಿಯನ್ನು ಬಿಸಿಬಿಸಿಯಾಗಿ ಸವಿದರೆ ತುಂಬಾ ಒಳ್ಳೆಯದು.