ಬೆಂಗಳೂರು: ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು (Independence Day) ಅಮೃತ ಮಹೋತ್ಸವವೆಂದು ಆಚರಿಸುತ್ತಿದೆ. ಈ ಅಮೃತ ಕಾಲದಲ್ಲಿ ಭಾರತವನ್ನು ಅಂತಾರಾಷ್ಟ್ರೀಯ ಸಂಶೋಧನೆಯ ಕೇಂದ್ರವನ್ನಾಗಿ (International Research Center) ರೂಪಿಸಲು, ನಾವು ಏಕಕಾಲದಲ್ಲಿ ಅನೇಕ ರಂಗಗಳಲ್ಲಿ ಕೆಲಸ ಮಾಡಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಕರೆ ನೀಡಿದರು.
Advertisement
ಬೆಂಗಳೂರಿನಲ್ಲಿ ವಿಟಿಯು (VTU) ನೇತೃತ್ವದಲ್ಲಿ ಆಯೋಜಿಸಿರುವ 3ನೇ ಟೆಕ್ ವಿಸಿ ಕಾನ್ಕ್ಲೇವ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, 2014 ರಿಂದ ದೇಶದಲ್ಲಿ ವಿಜ್ಞಾನ (Science) ಮತ್ತು ತಂತ್ರಜ್ಞಾನದಲ್ಲಿನ ಹೂಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಪ್ರಯತ್ನದಿಂದಾಗಿ, ಇಂದು ಭಾರತವು ಅಂತಾರಾಷ್ಟ್ರೀಯ ಸಂಶೋಧನಾ ಸೂಚ್ಯಂಕದಲ್ಲಿ 46ನೇ ಸ್ಥಾನದಲ್ಲಿದೆ. 2015ರಲ್ಲಿ 81ನೇ ಸ್ಥಾನದಲ್ಲಿತ್ತು ಎಂದು ಹೇಳಿದರು.
Advertisement
Advertisement
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಉದ್ದೇಶವು ನಮ್ಮ ದೇಶವನ್ನು ವಿಶ್ವ ಮಟ್ಟದಲ್ಲಿ ಶೈಕ್ಷಣಿಕ ಶಕ್ತಿಯನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಅದಕ್ಕಾಗಿ ಹೊಸ ಶಿಕ್ಷಣ ನೀತಿಯಲ್ಲಿ (National Education Policy), 21ನೇ ಶತಮಾನದ ಅಗತ್ಯಗಳನ್ನು ಪೂರೈಸಲು ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಹಲವು ನಿಬಂಧನೆಗಳನ್ನು ಮಾಡಲಾಗಿದೆ. ಎನ್‌ಇಪಿಯು ನಮ್ಮ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯನ್ನು ಉಜ್ವಲಗೊಳಿಸುವ ಜೊತೆಗೆ ಸುರಕ್ಷಿತವಾಗಿಯೂ ಇರಿಸುತ್ತದೆ. ನವಭಾರತ ನಿರ್ಮಾಣದಲ್ಲಿ ಇದರ ಪಾತ್ರ ನಿರ್ಣಾಯಕವಾಗಿರುತ್ತದೆ. ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ ಎಂದು ಎಚ್ಚರಿಸಿದರು.
Advertisement
ಮುಖ್ಯವಾಗಿ ಎನ್‌ಇಪಿ ಮಾತೃಭಾಷೆಯಲ್ಲಿ ಅಧ್ಯಯನದೊಂದಿಗೆ ಆದ್ಯತೆಯ ವಿಷಯವನ್ನು ಆಯ್ಕೆ ಮಾಡುವ ಸ್ವಾತಂತ್ರ‍್ಯ ನೀಡುತ್ತದೆ. ಎಲ್ಲರಿಗೂ ಉನ್ನತ ಶಿಕ್ಷಣ ಒದಗಿಸುತ್ತದೆ. ಇಂತಹ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಹಾಗಾಗಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಉತ್ತೇಜಿಸುವ ಸಲುವಾಗಿ, 2021-22 ಶೈಕ್ಷಣಿಕ ವರ್ಷದಿಂದ ಕನ್ನಡ ಮಾಧ್ಯಮದ ಮೂಲಕ ಇಂಜಿನಿಯರಿಂಗ್ ಶಿಕ್ಷಣ ನೀಡಲು ವಿಶ್ವವಿದ್ಯಾಲಯವು ಕಾಲೇಜುಗಳಿಗೆ ಅನುಮತಿ ನೀಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಅಶ್ವಥ್ ನಾರಾಯಣ್, ನ್ಯಾಕ್ ಅಧ್ಯಕ್ಷ ಪ್ರೊ.ಭೂಷಣ್ ಪಟವರ್ಧನ್, ಎನ್‌ಬಿಎ ಅಧ್ಯಕ್ಷ ಪ್ರೊ.ಕೆ.ಕೆ.ಅಗರ್ವಾಲ್, ವಿಟಿಯು ಕುಲಪತಿ ಕರಿಸಿದ್ದಪ್ಪ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.