ದಾವಣಗೆರೆ: ದಶಕಗಳ ಕಾಲದ ಹಳೇ ಬಾಂಡ್ ಪೇಪರ್ ತಯಾರಿಸಿ ಜನರಿಗೆ ಮೋಸ ಮಾಡುತ್ತಿದ್ದ 11 ವಂಚಕರ ಜಾಲವನ್ನು ದಾವಣಗೆರೆ ಡಿಸಿಬಿ ವಿಶೇಷ ಪೊಲೀಸ್ ತಂಡ ಬೇಧಿಸಿದೆ.
ರಾಘವೇಂದ್ರ, ಶಿವಕುಮಾರ್, ರೇವಣಸಿದ್ಧಯ್ಯ, ರಿಯಲ್ ಎಸ್ಟೇಟ್ ಉದ್ಯಮಿಗಳು. ಸತ್ಯಗೋವಿಂದರಾಜ, ಪ್ರಭು, ದ್ರಾವಿಡ, ಉಮೇಶ್, ಮಾರುತಿ, ನಂದು, ಆನಂದ್ ಸೇರಿದಂತೆ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಮೂಲದವರು ಎಂದು ತಿಳಿದು ಬಂದಿದೆ.
ಆರೋಪಿಗಳು ಯೂಟ್ಯೂಬ್‍ನಲ್ಲಿ ದಶಕಗಳ ಕಾಲದ ಹಿಂದೆ ಈಸ್ಟ್ ಇಂಡಿಯಾ ಕಂಪೆನಿಯ ಮುದ್ರಿಸುತ್ತಿದ್ದ ಬಾಂಡ್ ನೋಡಿಕೊಂಡು, ನಕಲಿ ಬಾಂಡ್‍ಗಳನ್ನು ತಯಾರಿಸುತ್ತಿದ್ದರು. ಅಲ್ಲದೇ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಬಾಂಡ್ ಪೇಪರ್ ಗಳಿಗೆ ಈಗಲೂ ಮಾನ್ಯತೆ ಇದೆ ಎಂದು ನಂಬಿಸಿ ಸಾರ್ವಜನಿಕರನ್ನ ಗಾಳಕ್ಕೆ ಬೀಳಿಸುತ್ತಿದ್ದರು.
ಯಾವುದೋ ಒಂದು ಜಾಗ ಅಥವಾ ಜಮೀನಿನ ಹೆಸರಿನಲ್ಲಿ ನಕಲಿ ಬಾಂಡ್ ತಯಾರಿಸಿ, ನಂತರ ಇದು ಈಸ್ಟ್ ಇಂಡಿಯಾ ಕಂಪೆನಿಯ ಜಾಗವಾಗಿದೆ. ನಿಮಗೆ ಕಡಿಮೆ ದರದಲ್ಲಿ ಮಾರುತ್ತೇವೆ ಎಂದು ಜನರನ್ನು ನಂಬಿಸುತ್ತಿದ್ದರು. ಬಾಂಡ್ ಪೇಪರ್ ಮೇಲೆ ಮೊದಲೇ ರಂಜಕ ಹಾಕಿ, ನೀವು ಬಾಂಡ್ ಪೇಪರ್ ಗಳನ್ನು ಬಿಸಿಲಿಗೆ ತಗೆದುಕೊಂಡು ಹೋದರೆ ಸುಟ್ಟು ಹೋಗುತ್ತದೆ ಎಂದು ಹೆದರಿಸುತ್ತಿದ್ದರು.
ಈಸ್ಟ್ ಇಂಡಿಯಾ ಕಂಪೆನಿಯ ನಕಲಿ ಆಟೋ ಫೈರ್ ಬಾಂಡ್ ಮಾರಾಟ ವೇಳೆ 11 ಮಂದಿ ವಂಚಕರನ್ನು ಡಿಸಿಬಿ ಪೊಲೀಸರ ಬಲೆಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.