ಲಕ್ನೋ: ಈ ಬಾರಿಯ ಉತ್ತರ ಪ್ರದೇಶದ ಬೋರ್ಡ್ ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ನಿಯಮವನ್ನು ಅಳವಡಿಸಿದ ಪರಿಣಾಮ ಕಳೆದ ನಾಲ್ಕು ದಿನಗಳಲ್ಲಿ 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು ಹಾಜರಿ ಹಾಕಿದ್ದಾರೆ.
ಭಾರೀ ಸಂಖ್ಯೆಯಲ್ಲಿ ಗೈರು ಹಾಜರಿ ಕಂಡು ಬಂದ ಪರಿಣಾಮ ಮುಂದೆ ಪರೀಕ್ಷಾ ಪ್ರಕ್ರಿಯೆಗಳನ್ನು ಸರಳಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ `ಎಕ್ಸಾಂ ವಾರಿಯರ್’ ಹಿಂದಿ ಅವತರಣಿಕೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಪರೀಕ್ಷೆಗಳ ಕುರಿತ ಭಯ ವಿದ್ಯಾರ್ಥಿಗಳಲ್ಲಿ ಮೂಡಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಪರೀಕ್ಷಾ ಕ್ರಮಗಳನ್ನು ಸರಳಗೊಳಿಸಲು ಬೇಕಾದ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು. ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಸವಾಲಾಗಿ ನಿರ್ಮಾಣವಾಗದೇ ದೈನಂದಿನ ಪ್ರಕ್ರಿಯೆಯಂತೆ ನಡೆಯಬೇಕು ಎಂದು ತಿಳಿಸಿದರು.
ಕಳೆದ ನಾಲ್ಕು ದಿನಗಳಿಂದ ಉತ್ತರಪ್ರದೇಶದಲ್ಲಿ ಬೋರ್ಡ್ ಪರೀಕ್ಷೆ ನಡೆಸಲಾಗುತ್ತಿದ್ದು, ಈ ಪರೀಕ್ಷೆಗೆ ಭಯದಿಂದ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಈ ಕುರಿತು ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯುಪಿ ಸಿಎಂ ಯೋಗಿ ಅದಿತ್ಯನಾಥ್ ಪರೀಕ್ಷೆಗಳನ್ನು ಕಟ್ಟು ನಿಟ್ಟಿನಿಂದ ನಡೆಸಲು ಸೂಚನೆ ನೀಡಲಾಗಿತ್ತು. ಆದರೆ ಪರೀಕ್ಷಾ ಭಯಕ್ಕೆ ಹೆದರಿ 10 ಲಕ್ಷ ವಿದ್ಯಾರ್ಥಿಗಳು ಹಾಜರಾಗಿಲ್ಲ. ಇದು ಸದ್ಯದ ಅಂಕಿ ಅಂಶಗಳು ಮಾತ್ರ. ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುವುದು ನನಗೂ ತಿಳಿದಿಲ್ಲ ಎಂದು ಹೇಳಿದರು.
ಇದೇ ವೇಳೆ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡವನ್ನು ಹಾಕದಂತೆ ಪೋಷಕರಿಗೆ ಸಿಎಂ ಯೋಗಿ ಕರೆ ನೀಡಿದರು. ಕಳೆದ 10 ತಿಂಗಳಿನಲ್ಲಿ 6 ಲಕ್ಷ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗಿದೆ. 2.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. 1.4 ಲಕ್ಷ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ನೀಡಲಾಗಿದೆ. ಹಳ್ಳಿಯಲ್ಲಿ ಇದ್ದುಕೊಂಡೆ ತಿಂಗಳಿಗೆ 14 ರಿಂದ 15 ಸಾವಿರ ರೂ. ಗಳಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕೌಶಲ್ಯ ಅಭಿವೃದ್ಧಿಯಲ್ಲಿ ನೀಡಲಾಗಿದ್ದ ತಾಂತ್ರಿಕ ಕೌಶಲ್ಯಗಳ ಅಳವಡಿಕೆಯಿಂದ ರಾಜ್ಯದ 14 ಸಾವಿರ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳು 35 ಕೋಟಿ ರೂ. ಉಳಿತಾಯ ಮಾಡಲಾಗುತ್ತಿದೆ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿದ್ದ ಮಾಫಿಯಾ ವಿರುದ್ಧವೂ ಕಠಿಣ ಕ್ರಮಕೈಗೊಳ್ಳಲು ಸೂಚಿಸಿದ್ದರು.