ದಲಿತ ನಾಯಕನನ್ನ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಮಾಡಲಿ- ಕಾಂಗ್ರೆಸ್‌ಗೆ ಜೆಡಿಎಸ್ ಸವಾಲ್

Public TV
2 Min Read
JDS CONGRESS

ಬೆಂಗಳೂರು: ಕಾಂಗ್ರೆಸ್‌‌ನಲ್ಲಿ (Congress) ನಡೆಯುತ್ತಿರೋ ಸಿಎಂ ಸ್ಥಾನದ ಚರ್ಚೆಗೆ ಜೆಡಿಎಸ್ (JDS) ಎಂಟ್ರಿಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕಿಡಿಕಾರಿರುವ ಜೆಡಿಎಸ್, ದಲಿತ ನಾಯಕರನ್ನ ಸಿಎಂ ಮಾಡಿ ಅಂತಾ ಸವಾಲ್ ಹಾಕಿದೆ.

ಈ ಸಂಬಂಧ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಜೆಡಿಎಸ್, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದೆ. ದಲಿತರ ಹೆಸರೇಳಿಕೊಂಡು ಬಲಿತಿರುವ, ಬರೋಬ್ಬರಿ 44 ವರ್ಷಗಳ ಕಾಲ ರಾಜ್ಯವನ್ನು ಆಳಿರುವ ಕಾಂಗ್ರೆಸ್‌ ಪಕ್ಷವು ದಲಿತರನ್ನು ಕೇವಲ ಮತಬ್ಯಾಂಕ್‌ ಆಗಿ ಮಾಡಿಕೊಂಡಿದೆ. ನಾವು ದಲಿತರ ಪರ, ಸಾಮಾಜಿಕ ನ್ಯಾಯದ ಪರ ಎಂದು ಬೊಗಳೆ ಬಿಡುವ ಕಾಂಗ್ರೆಸ್ ನಾಯಕರು, ಚುನಾವಣೆಗಳಲ್ಲಿ ದಲಿತರ ಮತ ಪಡೆದು ಗೆದ್ದ ಬಳಿಕ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡದೇ ವಂಚಿಸುತ್ತಲೇ ಬಂದಿದ್ದಾರೆ ಎಂದು ಕಿಡಿಕಾರಿದೆ. ಇದನ್ನೂ ಓದಿ: ನಾವು ರಾಜಕೀಯ ಸಭೆ ಮಾಡಿಲ್ಲ, ನಮ್ಮ ಮೇಲಿನ ಆಪಾದನೆಯಿಂದ ಬೇಜಾರಾಗಿದೆ: ಪರಮೇಶ್ವರ್

ಮುಡಾ ಹಗರಣದಿಂದ ತೆರವಾಗಲಿರುವ ಸಿಎಂ ಕುರ್ಚಿಗಾಗಿ ಮತ್ತೆ ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ. ಆದರೆ ಹೈಕಮಾಂಡ್‌ ದಲಿತ ಸಿಎಂ ಚರ್ಚೆಗೆ ಕಡಿವಾಣ ಹಾಕಲು ಕೇರಳ ರಾಜ್ಯದ ನಾಯಕನ್ನು ಛೂ ಬಿಟ್ಟಿದೆ. ರಾಜ್ಯದ ದಲಿತ ನಾಯಕರು ಸಿಎಂ ಹುದ್ದೆ ವಿಚಾರವಾಗಿ ಚರ್ಚೆ ನಡೆಸಿದರೆ ಅನ್ಯ ರಾಜ್ಯದ ಕಾಂಗ್ರೆಸ್‌ ಮುಖಂಡರ ಮೂಲಕ ನಿಯಂತ್ರಣ ಹೇರುತ್ತಿದೆ. ದಲಿತ ಸಿಎಂ ಹುದ್ದೆ ಬಗ್ಗೆ ಚರ್ಚೆ ಬಂದಾಗೆಲ್ಲ ಕಾಂಗ್ರೆಸ್ ಹೈಕಮಾಂಡ್‌ ಮಧ್ಯ ಪ್ರವೇಶಿಸಿ ಕಡಿವಾಣ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದೆ.

ಶತಮಾನದ ಇತಿಹಾಸವಿರುವ ಕಾಂಗ್ರೆಸ್‌ ಪಕ್ಷ ದಲಿತರನ್ನು ಕೇವಲ ಬಳಸಿ ಬಿಸಾಡುವಂತೆ ನಡೆಸಿಕೊಳ್ಳುತ್ತಲೇ ಇದೆ. ಕಾಂಗ್ರೆಸ್‌ ಹೈಕಮಾಂಡ್‌, ಗುಲಾಮಗಿರಿ ಬಿಟ್ಟು ಈಗಾಲಾದರೂ ರಾಜ್ಯದಲ್ಲಿ ದಲಿತ ನಾಯಕರೊಬ್ಬರಿಗೆ ಮುಖ್ಯಮಂತ್ರಿ ಮಾಡಿ ನ್ಯಾಯ ಒದಗಿಸಲಿ ಎಂದು ಜೆಡಿಎಸ್‌ ಸವಾಲು ಹಾಕಿದೆ. ಇದನ್ನೂ ಓದಿ: ರಾಜಕೀಯಕ್ಕಾಗಿ ಕಾಂಗ್ರೆಸ್ ಪಕ್ಷ ದಲಿತ ಕಾರ್ಡ್ ಪ್ಲೇ ಮಾಡ್ತಿದೆ – ಛಲವಾದಿ ನಾರಾಯಣಸ್ವಾಮಿ

Share This Article