ದಿನನಿತ್ಯ ಒಂದೇ ರೀತಿಯ ಊಟ ತಿಂದು ಬೇಜಾರಾಗಿದ್ಯಾ? ಅಥವಾ ಹುಷಾರಿಲ್ವಾ? ಹಾಗಿದ್ರೆ ಒಮ್ಮೆ ಖಾರವಾದ ಬೆಳ್ಳುಳ್ಳಿ ಚಟ್ನಿ ತಿಂದು ನೋಡಿ.. ನಿಜಕ್ಕೂ ಇನ್ನೊಮ್ಮೆ ತಿನ್ನಬೇಕು ಅನಿಸುತ್ತೆ. ದೋಸೆ, ಇಡ್ಲಿ, ರೊಟ್ಟಿ, ಪರಾಟ, ಬಿಸಿ ಅನ್ನದ ಜೊತೆ ಈ ಬೆಳ್ಳುಳ್ಳಿ ಚಟ್ನಿಯನ್ನು ತಿಂದರೆ ನಿಜಕ್ಕೂ ಅದ್ಭುತವಾಗಿರುತ್ತದೆ. ಮಾಡೋದು ಹೇಗೆ ಎನ್ನುವ ಕುರಿತು ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು:
ತಾಜಾ ಬೆಳ್ಳುಳ್ಳಿ ಎಸಳು
ಟೊಮೆಟೊ
ಶುಂಠಿ
ಒಣ ಮೆಣಸಿನಕಾಯಿ
ದಾಲ್ಚಿನ್ನಿ
ಕೊತ್ತಂಬರಿ ಸೊಪ್ಪು
ಸ್ವಲ್ಪ ಸಾಸಿವೆ ಎಣ್ಣೆ
ಜೀರಿಗೆ
ಮೆಂತ್ಯ
ಧನಿಯಾ ಪುಡಿ
ಕೆಂಪು ಖಾರದ ಪುಡಿ
ಜೀರಿಗೆ ಪುಡಿ
ನಿಂಬೆ ರಸ
ಉಪ್ಪು
ಸಕ್ಕರೆ

ಮಾಡುವ ವಿಧಾನ:
ಮೊದಲು ಬೆಳ್ಳುಳ್ಳಿ ಎಸಳುಗಳನ್ನು ಸಿಪ್ಪೆ ತೆಗೆದು, ಸ್ವಚ್ಛವಾಗಿ ತೊಳೆಯಿರಿ. ಬಿಸಿ ನೀರಿನ ಪಾತ್ರೆಗೆ ಒಣಗಿದ ಮೆಣಸಿನಕಾಯಿಯನ್ನು ಹಾಕಿ 5 ರಿಂದ 10 ನಿಮಿಷಗಳ ಕಾಲ ನೆನೆಸಿಡಿ. ಬಳಿಕ ಮಿಕ್ಸರ್ ಜಾರ್‌ನಲ್ಲಿ ಬೆಳ್ಳುಳ್ಳಿ ಎಸಳುಗಳು, ಕತ್ತರಿಸಿದ ಟೊಮೆಟೊ ಹಾಗೂ ಶುಂಠಿ, ಕೊತ್ತಂಬರಿ ಸೊಪ್ಪು, ನೆನೆಸಿದ ಒಣ ಮೆಣಸಿನಕಾಯಿ, ದಾಲ್ಚಿನ್ನಿ, ಸ್ವಲ್ಪ ಉಪ್ಪು, ಒಂದು ಚಮಚ ಎಣ್ಣೆ ಮತ್ತು ಒಂದು ಚಮಚ ಜೀರಿಗೆ ಸೇರಿಸಿ ನಯವಾದ ಪೇಸ್ಟ್ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿಕೊಳ್ಳಿ
ಆನಂತರ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ. ಬಿಸಿಯಾದ ನಂತರ ಮಾಡಿ ಜೀರಿಗೆ ಮತ್ತು ಸ್ವಲ್ಪ ಮೆಂತ್ಯ ಸೇರಿಸಿ ಹುರಿಯಿರಿ. ಬಳಿಕ ರುಬ್ಬಿಕೊಂಡ ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಹೊತ್ತಿನ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಅದಕ್ಕೆ ಧನಿಯಾ ಪುಡಿ, ಜೀರಿಗೆ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ಮಸಾಲೆ ಪದಾರ್ಥಗಳು ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.
ಕೊನೆಗೆ ಒಲೆಯನ್ನು ಆರಿಸಿ, ಒಂದು ಚಮಚ ನಿಂಬೆ ರಸ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿದರೆ ಬೆಳ್ಳುಳ್ಳಿ ಚಟ್ನಿ ಸಿದ್ಧ. ಇದನ್ನು ದೋಸೆ, ಇಡ್ಲಿ, ಚಪಾತಿ, ಬಿಸಿ ಅನ್ನ ಜೊತೆ ಸವಿಯಬಹುದು.


