ಮೈಸೂರು: ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮೈಮುಲ್) ಸಂಕ್ರಾಂತಿ ಉಡುಗೊರೆ ನೀಡಿದೆ. ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 2.50 ರೂ. ಹೆಚ್ಚಳ ಮಾಡಿದೆ. ಮೈಮುಲ್‍ನ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಒಕ್ಕೂಟವೂ ಹಾಲು ಉತ್ಪಾದಕ ಸಂಘಗಳಿಂದ ಶೇಖರಿಸುವ ಶೇ. 3.5 ಜಿಡ್ಡಿನಾಂಶ ಹಾಗೂ ಶೇ. 8.5 ಎಸ್‍ಎನ್‍ಎಫ್ ಇರುವ ಪ್ರತಿ ಲೀಟರ್ ಹಾಲಿಗೆ 30.15 ರೂ.ಗಳಂತೆ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 28 ರೂ. ನಂತೆ ನಿಗದಿ ಮಾಡಿದೆ. ರೈತರಿಂದ ಖರೀದಿಸುವ ಲೀಟರ್ ಹಾಲಿಗೆ 2.50 ರೂಪಾಯಿ ಏರಿಕೆ ಮಾಡಿದ್ದರೂ ಇದರ ಹೊರೆಯನ್ನು ಒಕ್ಕೂಟವು ಗ್ರಾಹಕರ ಮೇಲೆ ಹೇರಿಲ್ಲ.
Advertisement
ಒಕ್ಕೂಟದ ಈ ನಿರ್ಧಾರದಿಂದ ಒಕ್ಕೂಟಕ್ಕೆ ಪ್ರತಿ ತಿಂಗಳು 4 ಕೋಟಿ ರೂಪಾಯಿ ಹೊರೆಯಾಗಲಿದೆ. ಮೈಸೂರು ಜಿಲ್ಲೆಯಲ್ಲಿ 1,088 ಹಾಲು ಉತ್ಪಾದಕ ಸಹಕಾರ ಸಂಘಗಳಿವೆ. ಪ್ರತಿದಿನ ಸರಾಸರಿ 5.50 ಲಕ್ಷ ಕೆಜಿ ಹಾಲನ್ನು ಒಕ್ಕೂಟ ಸಂಗ್ರಹಿಸುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಪ್ರತಿದಿನ 2.35 ಲಕ್ಷ ಲೀಟರ್ ಹಾಲು ಹಾಗೂ 40 ಸಾವಿರ ಕೆಜಿ ಮೊಸರನ್ನು ಮಾರಾಟ ಮಾಡಲಾಗುತ್ತಿದೆ.