ಮಕರ ಸಂಕ್ರಾಂತಿ (Makar Sankranti) ಎಂದೊಡನೆ ಥಟ್ಟನೆ ನೆನಪಾಗುವುದು ಹಸುಗಳಿಗೆ ಕಿಚ್ಚು ಹಾಯಿಸುವುದು. ಹಳೆ ಮೈಸೂರು ಭಾಗದಲ್ಲಿ ಈ ಪದ್ಧತಿ ಹೆಚ್ಚು ಜನಜನಿತ. ಮಾಗಿಯ ಚಳಿಯಲ್ಲಿ ಮುಂಜಾನೆಯೇ ಎದ್ದು ಹಸು-ಕುರಿ-ಮೇಕೆಗಳನ್ನು ಜನರು ಕಾಲುವೆ, ಕರೆ-ಕಟ್ಟೆ, ಅಥವಾ ನದಿಗಳ ಕಡೆಗೆ ಅಟ್ಟಿಕೊಂಡು ಹೋಗುತ್ತಾರೆ. ಅಲ್ಲಿ ಅವುಗಳ ಮೈ ಉಜ್ಜಿ ಚೆನ್ನಾಗಿ ಸ್ನಾನ ಮಾಡಿಸಿ ಮನೆಗೆ ತಂದು ಕಟ್ಟುತ್ತಾರೆ. ಬಣ್ಣಗಳಿಂದ ರಾಸುಗಳ ಮೈ-ಕೊಂಬುಗಳಲ್ಲಿ ಚಿತ್ತಾರ ಮೂಡಿಸುತ್ತಾರೆ. ಕೊಂಬುಗಳಿಗೆ ಬಲೂನು ಕಟ್ಟಿ ಸಿಂಗರಿಸುತ್ತಾರೆ. ಕೊನೆಗೆ ಹಸುಗಳನ್ನು ಕಿಚ್ಚು ಹಾಯಿಸುವುದಕ್ಕೆ ಅಣಿಗೊಳಿಸುತ್ತಾರೆ.
ಇತ್ತ ಹೆಂಗಸರು ಮನೆಗಳನ್ನು ಸ್ವಚ್ಛಗೊಳಿಸಿ ದೇವರ ಕೋಣೆಗಳನ್ನು ಅಲಂಕರಿಸುತ್ತಾರೆ. ಹೊಸ ಬಟ್ಟೆ ಧರಿಸಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಜೊತೆಗೆ ಬಗೆಬಗೆಯ ವಿಶೇಷ ಭಕ್ಷ್ಯಗಳನ್ನು ಸಿದ್ಧಪಡಿಸುತ್ತಾರೆ. ಮನೆಯ ಮಕ್ಕಳು ಸಹ ಉತ್ಸಾಹದಿಂದ ಸಿದ್ಧತೆ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಇದನ್ನೂ ಓದಿ: ಇಂದಿನಿಂದ ಉತ್ತರಾಯಣ ಆರಂಭ – ಶುಭ ಕಾರ್ಯಕ್ಕೆ ಮಂಗಳಕರ ಅವಧಿ ಯಾಕೆ?
ಸಂಜೆಯಾಗುತ್ತಿದ್ದಂತೆ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿರುತ್ತದೆ. ಊರಿನ ಸಿಂಗರಿಸಿದ ಹಸುಗಳನ್ನು ಒಂದು ಕಡೆ ಕಿಚ್ಚು ಹಾಯಿಸಲು ಕರೆತರಲಾಗುತ್ತದೆ. ನೆಲಕ್ಕೆ ಹುಲ್ಲನ್ನು ಹಾಕಿ ಬೆಂಕಿ ಹಚ್ಚಿ, ಹಸುಗಳಿಗೆ ಕಿಚ್ಚು ಹಾಯಿಸಲಾಗುತ್ತದೆ. ಬೆಚ್ಚುವ ಹಸುಗಳನ್ನು ಹುರಿದುಂಬಿಸುತ್ತಾ ಬೆಂಕಿಯಿಂದ ಜಿಗಿಸುವ ದೃಶ್ಯ ರಂಜನೀಯವಾಗಿರುತ್ತದೆ. ಆ ದೃಶ್ಯವನ್ನು ಕಣ್ತುಂಬಿಕೊಂಡು ಆನಂದಿಸಲು ಇಡೀ ಊರಿಗೆ ಊರೇ ನೆರೆದಿರುತ್ತದೆ.
ಚಳಿಗಾಲ ಎಂದರೆ ಸೋಂಕು, ಕಾಯಿಲೆಗಳ ಕಾಲ. ಹಿಂದೆಲ್ಲ ಹಸುಗಳೇ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದವು. ಹಬ್ಬದ ಸಂದರ್ಭದಲ್ಲಿ ಅವುಗಳನ್ನು ಚೆನ್ನಾಗಿ ತೊಳೆದು ಮೈ ತುಂಬೆಲ್ಲಾ ಅರಿಸಿನ ಹಚ್ಚುವುದರಿಂದ, ಸೋಂಕಿಗೆ ತುತ್ತಾಗುವುದನ್ನು ತಡೆಯಬಹುದು. ಕಿಚ್ಚು ಹಾಯುವಾಗ ಹಸುಗಳ ಮೈಗೆ ಬೆಂಕಿಯ ಹವೆ ತಾಕಿ ಕ್ರಿಮಿಗಳು ನಾಶವಾಗುತ್ತವೆ. ಕಿಚ್ಚು ಹಾಯುವುದರಿಂದ ಚಳಿಯಲ್ಲಿ ಹಸುಗಳಿಗೆ ಬೆಚ್ಚನೆಯ ಅನುಭವವಾಗಿ ಮೈಕೊಡವಿ ನಿಲ್ಲಲು ಸಾಧ್ಯವಾಗುತ್ತದೆ. ಇದನ್ನೂ ಓದಿ: ಬೇರೆ ಬೇರೆ ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆ ಹೇಗೆ?
ಹಸುಗಳಿಗೆ ಕಿಚ್ಚು ಹಾಯಿಸಿದ ಬಳಿಕ ಬೆಂಕಿಯಿಂದಾದ ಬೂದಿಯನ್ನು ತೆಗೆದುಕೊಂಡು ಜನರು ಭಕ್ತಿ-ಭಾವದಿಂದ ಹಣೆಗೆ ತಿಲಕ ಇಟ್ಟುಕೊಳ್ಳುತ್ತಾರೆ. ಕಿಚ್ಚು ಹಾಯ್ದ ಗೋವುಗಳನ್ನು ಮನೆಗೆ ಕರೆತಂದು ಅವುಗಳ ಕಾಲು ತೊಳೆದು ಹೆಂಗಳೆಯರು ಗೋಪೂಜೆ ಮಾಡುತ್ತಾರೆ. ಮನೆಯಲ್ಲಿ ತಯಾರಿಸಿದ ಭಕ್ಷ್ಯ ಮತ್ತು ಬಾಳೆ ಹಣ್ಣನ್ನು ಮೊದಲು ಗೋವಿಗೆ ತಿನ್ನಿಸುತ್ತಾರೆ. ಗೋವು ತಿಂದು ಉಳಿಸಿದ್ದನ್ನು ಪ್ರಸಾದವೆಂದು ಭಕ್ತಿಯಿಂದ ಮನೆಮಂದಿ ಸೇವಿಸುತ್ತಾರೆ. ಕೊನೆಗೆ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಹಬ್ಬದೂಟ ಸವಿದು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಆನಂದಿಸುತ್ತಾರೆ.
ಎಳ್ಳು-ಬೆಲ್ಲ: ಸಂಕ್ರಾಂತಿಯ ಸಾಂಪ್ರದಾಯಿಕ ತಿನಿಸು ಇದು. ‘ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡು’ ಅಂತಾರೆ. ಚಳಿಗಾಲದಲ್ಲಿ ಮನುಷ್ಯನ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ಮೈ ಚರ್ಮ ಒಡೆಯುತ್ತದೆ. ಇಂತಹ ಸಂದರ್ಭದಲ್ಲಿ ಎಣ್ಣೆ ಅಂಶವಿರುವ ಪದಾರ್ಥ ಸೇವನೆ ದೇಹಕ್ಕೆ ತುಂಬಾ ಸಹಕಾರಿ. ಈ ಹಿನ್ನೆಲೆಯಲ್ಲಿ ಎಳ್ಳು ದೇಹಕ್ಕೆ ಅಗತ್ಯ ಎಣ್ಣೆಯಂಶವನ್ನು ನೀಡುತ್ತದೆ. ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಎಳ್ಳು-ಬೆಲ್ಲ
ಕಿಚಡಿ-ಕಾಯಾಲು ಭಕ್ಷ್ಯದ ಗಮ್ಮತ್ತು: ಸಂಕ್ರಾಂತಿ ಹಬ್ಬದಂದು ಹೆಚ್ಚು ಪ್ರಚಲಿತದಲ್ಲಿರುವ ಭಕ್ಷ್ಯವೆಂದರೆ ಅದು ಕಿಚಡಿ-ಕಾಯಾಲು. ಅರಿಸಿನ, ಮೆಣಸು, ಜೀರಿಗೆ ಬಳಸಿ ಕಿಚಡಿ ತಯಾರಿಸಲಾಗುತ್ತದೆ. ಅದಕ್ಕೆ ಹೊಂದುವ ಸಿಹಿಯಾದ ಕಾಯಾಲನ್ನು ತೆಂಗಿನಕಾಯಿ, ಬೆಲ್ಲ ಬಳಸಿ ಮಾಡಲಾಗುತ್ತದೆ. ಚಳಿಗಾಲದಲ್ಲಿ ಈ ಭಕ್ಷ್ಯವು ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಅರಿಸಿನ ಮತ್ತು ಮೆಣಸು ಮನುಷ್ಯನ ಆರೋಗ್ಯಕ್ಕೆ ಉಪಯುಕ್ತವಾದ ಪದಾರ್ಥಗಳು.
ಅವರೆಕಾಳು ಪಲ್ಯ, ಸಾಂಬಾರ್: ಈ ಸೀಸನ್‌ನಲ್ಲಿ ಜನಪ್ರಿಯ ಬೆಳೆ ಎಂದರೆ ಅದು ಅವರೆಕಾಳು. ಚಳಿಗಾಲದಲ್ಲಿ ಅವರೆಕಾಳು ಬಳಸಿ ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಹಬ್ಬದ ದಿನ ಅವರೆಕಾಳು ಪಲ್ಯ, ಸಾಂಬಾರ್ ಮಾಡಿ ಜನ ಬಾಯಿ ಚಪ್ಪರಿಸಿ ಸವಿಯುವುದುಂಟು. ಇದನ್ನೂ ಓದಿ: Sankranti 2025: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸುವುದೇಕೆ? – ಈ ಕೌತುಕ ನೀವು ತಿಳಿಯಲೇಬೇಕು