ಮಹಾಭಾರತ ಯುದ್ಧದ 10 ದಿನ ಶಿಖಂಡಿ ಮುಂದೆ ಸೋತ ಭೀಷ್ಮ (Bhishma) ಮರಣಶಯ್ಯೆಯಲ್ಲಿ ಮಲಗಿ 58 ದಿನದ ಬಳಿಕ ತನ್ನ ದೇಹವನ್ನು ತ್ಯಾಗ ಮಾಡುತ್ತಾನೆ. ತಂದೆ ಸಂತನು ಮಹಾರಾಜ ನೀಡಿದ ಇಚ್ಛಾ ಮರಣ (Iccha Mrityu) ವರದಿಂದ ಭೀಷ್ಮ ಶರದಲ್ಲಿ ಮಲಗಿ 58 ದಿನ ಕಳೆದಿದ್ದ.
ಭೀಷ್ಮ ಯಾವಾಗ ಬೇಕಾದರೂ ಪ್ರಾಣ ತ್ಯಾಗ ಮಾಡಬಹುದಿತ್ತು. ಆದರೆ 58ನೇ ದಿನಕ್ಕೆ ಪ್ರಾಣತ್ಯಾಗ ಮಾಡಿದ್ದು ಯಾಕೆ ಎನ್ನುವುದಕ್ಕೂ ಕಾರಣ ಇದೆ. ಹಿಂದೂ ಪಂಚಾಂಗದ ಪ್ರಕಾರ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯ ಪ್ರವೇಶಿಸುವ ಸಂಧಿಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಮೇಷಾದಿ ರಾಶಿಗಳಲ್ಲಿ ಸೂರ್ಯನ ಪರಿಭ್ರಮಣೆಯ ಚಲನೆಯನ್ನವಲಂಬಿಸಿ 12 ಮಾಸಗಳನ್ನಾಗಿ ವಿಂಗಡಿಸಲಾಗಿದೆ. ಧನು ಮಾಸ ಕೊನೆಯಾಗಿ ಸಂಕ್ರಮಣದಂದು ಮಕರ ಮಾಸಕ್ಕೆ ಸೂರ್ಯ ಪ್ರವೇಶಿಸುತ್ತಾನೆ. ಇಲ್ಲಿಯವರೆಗೆ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದ ಸೂರ್ಯ, ಇಂದಿನಿಂದ ಉತ್ತರ ದಿಕ್ಕಿಗೆ ಚಲಿಸುತ್ತಾನೆ.
ಸೂರ್ಯನ ಚಲನೆಗೆ ಅನುಸಾರವಾಗಿ ಎರಡು ಆಯನಗಳಿವೆ. ಆಯನ ಎಂದರೆ ಚಲಿಸುವುದು ಎಂದರ್ಥ. ಸೂರ್ಯನು ಮಕರ ರಾಶಿಯಿಂದ ಮಿಥುನ ಮಾಸಾಂತ್ಯದವರೆಗೆ ಸಂಚರಿಸುವಾಗ ಉತ್ತರಾಯಣವಾಗುತ್ತದೆ. ಕರ್ಕಾಟಾದಿ ಧನುರಾಂತ್ಯದವರೆಗೆ ಸೂರ್ಯನು ಸಂಚರಿಸುವಾಗ ದಕ್ಷಿಣಾಯಣವಾಗುತ್ತದೆ. ಪ್ರತಿ ವರ್ಷ ಜನವರಿ 14 ಅಥವಾ 15 ರಿಂದ ಜುಲೈ 15ರವರೆಗಿನ ಅವಧಿಯನ್ನು ʼಉತ್ತರಾಯಣʼ ಹಾಗೂ ಜುಲೈ 16 ರಿಂದ ಜನವರಿ 14ರ ಅವಧಿಯನ್ನು ʼದಕ್ಷಿಣಾಯನʼ ಎಂದು ಕರೆಯಲಾಗುತ್ತದೆ. ಪುಷ್ಯಮಾಸದಲ್ಲಿಬರುವ(ಜನವರಿ 14 ಅಥವಾ 15) ಬರುವ ಸಂಕ್ರಮಣವನ್ನು (Makar Sankranti) ʼಉತ್ತರಾಯಣ ಪುಣ್ಯಕಾಲʼ ಎಂದು ಕರೆಯಲಾಗುತ್ತದೆ. ದೇವರ ಆರಾಧನೆ, ದಾನ, ಧರ್ಮ, ಮತ್ತು ವಿವಾಹಗಳಂತಹ ಕಾರ್ಯಗಳಿಗೆ ಮಂಗಳಕರ ಅವಧಿ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ವರ್ಷದ ಮೊದಲ ಹಬ್ಬ; ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಆಚರಣೆ ಹೇಗೆ?
ಕೇವಲ ಬದುಕುಕುವುದಕ್ಕೆ ಮಾತ್ರವೇ ಅಲ್ಲ, ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ. ಉತ್ತರಾಯಣ ಪುಣ್ಯ ಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದ. ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠ ಕಾಲವೆಂದು ಕರೆಯಲಾಗುತ್ತದೆ.
ಭೀಷ್ಮ ಸೋತಿದ್ದು ಹೇಗೆ?
ಮಹಾಭಾರತ ಯುದ್ಧದಲ್ಲಿ ಭೀಷ್ಮ ಸಾವಿರಾರು ಸೈನಿಕರನ್ನು ಹತ್ಯೆ ಮಾಡುತ್ತಿದ್ದಾಗ ಕಂಗಾಲಾದ ಧರ್ಮರಾಯ 9ನೇ ದಿನದ ರಾತ್ರಿ ಅಜ್ಜನನ್ನು ಭೇಟಿಯಾಗುತ್ತಾನೆ. ಕೌರವ ಮಾಡುತ್ತಿರುವುದು ತಪ್ಪು, ಅಧರ್ಮ ಎನ್ನುವುದು ನಿಮಗೆ ತಿಳಿದಿದ್ದರೂ ನೀವು ಹೋರಾಟ ಮಾಡಿ ಸೈನಿಕರನ್ನು ಕೊಲ್ಲುತ್ತಿದ್ದೀರಿ ಇದು ಸರಿಯೇ ಎಂದು ಧರ್ಮದ ಬಗ್ಗೆ ಪ್ರಶ್ನೆ ಕೇಳುತ್ತೇನೆ. ಈ ಸಂದರ್ಭದಲ್ಲಿ ಭೀಷ್ಮ ತನ್ನ ಹಿಂದಿನ ಕಥೆಯನ್ನು ಹೇಳಿ ತಂದೆ ನೀಡಿದ ಇಚ್ಛಾಮರಣ ವರದ ಬಗ್ಗೆ ಹೇಳುತ್ತಾನೆ. ಅಷ್ಟೇ ಅಲ್ಲದೇ ಸ್ತ್ರೀಯಾಗಿ ಜನಿಸಿ ಪುರುಷನಾಗಿರುವ ವ್ಯಕ್ತಿ ಜೊತೆ ನಾನು ಯುದ್ಧ ಮಾಡುವುದಿಲ್ಲ. ಹೀಗಾಗಿ ನೀವು ಶಿಖಂಡಿಯನ್ನು ಮುಂದೆ ತಂದರೆ ನಾನು ಶಸ್ತ್ರತ್ಯಾಗ ಮಾಡುತ್ತೇನೆ ಎಂದು ಹೇಳುತ್ತಾನೆ. ಇದನ್ನೂ ಓದಿ: ಸಂಕ್ರಾಂತಿ ಭವಿಷ್ಯ – ಯಾವ ರಾಶಿಯವರಿಗೆ ಏನು?
ಭೀಷ್ಮನು ಶರದ ಹಾಸಿಗೆಯ ಮೇಲೆ ಮಲಗಿದ್ದರೂ ಯುದ್ಧ 10 ದಿನಗಳ ಕಾಲ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಯುಧಿಷ್ಠಿರನಿಗೆ ರಾಜಧರ್ಮ, ಮೋಕ್ಷಧರ್ಮ ಮತ್ತು ಆಪದ್ಧರ್ಮ ಇತ್ಯಾದಿಗಳ ಅಮೂಲ್ಯವಾದ ಉಪದೇಶಗಳನ್ನು ನೀಡುತ್ತಾನೆ. ಈ ಉಪದೇಶವನ್ನು ಕೇಳಿದ್ದರಿಂದ ಯುಧಿಷ್ಠಿರನು ಅಪರಾಧ ಮತ್ತು ಪಶ್ಚಾತ್ತಾಪದಿಂದ ಮುಕ್ತನಾಗುತ್ತಾನೆ. ಭೀಷ್ಮನ ಈ ಬೋಧನೆಯನ್ನು ಈಗ ʼಭೀಷ್ಮ ನೀತಿʼ ಎಂದು ಕರೆಯಲಾಗುತ್ತದೆ. ಕೊನೆಗೆ ಸೂರ್ಯ ಉತ್ತರಾಯಣ ಪ್ರವೇಶಿಸಿದ ದಿನ ಭೀಷ್ಮ ದೇಹ ತ್ಯಾಗ ಮಾಡುತ್ತಾನೆ.

