ಭೂಮಿಯ ಎಲ್ಲಾ ಚಟುವಟಿಕೆಗಳಿಗೆ ಆಧಾರ ಯಾರು ಎಂದರೆ ಸೂರ್ಯ. ಹಿಂದೂ ಪಂಚಾಂಗದ ಪ್ರಕಾರ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯ (Sun) ಪ್ರವೇಶಿಸುವ ಸಂಧಿಕಾಲಕ್ಕೆ ಸಂಕ್ರಮಣ (Sankramana) ಅಥವಾ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಮೇಷಾದಿ ರಾಶಿಗಳಲ್ಲಿ ಸೂರ್ಯನ ಪರಿಭ್ರಮಣೆಯ ಚಲನೆಯನ್ನು ಆಧಾರಿಸಿ 12 ಮಾಸಗಳನ್ನಾಗಿ ವಿಂಗಡಿಸಲಾಗಿದೆ. ಧನು ಮಾಸ ಕೊನೆಯಾಗಿ ಸಂಕ್ರಮಣದಂದು ಮಕರ ಮಾಸಕ್ಕೆ ಸೂರ್ಯ ಪ್ರವೇಶಿಸುತ್ತಾನೆ. ಇಲ್ಲಿಯವರೆಗೆ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದ ಸೂರ್ಯ, ಇಂದಿನಿಂದ ಉತ್ತರ ದಿಕ್ಕಿಗೆ ಚಲಿಸುತ್ತಾನೆ.
ಸೂರ್ಯನ ಚಲನೆಗೆ ಅನುಸಾರವಾಗಿ ಎರಡು ಆಯನಗಳಿವೆ. ಆಯನ ಎಂದರೆ ಚಲಿಸುವುದು ಎಂದರ್ಥ. ಸೂರ್ಯನು ಮಕರ ರಾಶಿಯಿಂದ ಮಿಥುನ ಮಾಸಾಂತ್ಯದವರೆಗೆ ಸಂಚರಿಸುವಾಗ ಉತ್ತರಾಯಣವಾಗುತ್ತದೆ. ಕರ್ಕಾಟಾದಿ ಧನುರಾಂತ್ಯದವರೆಗೆ ಸೂರ್ಯನು ಸಂಚರಿಸುವಾಗ ದಕ್ಷಿಣಾಯಣವಾಗುತ್ತದೆ. ಪ್ರತಿ ವರ್ಷ ಜನವರಿ 14 ಅಥವಾ 15 ರಿಂದ ಜುಲೈ 15ರವರೆಗಿನ ಅವಧಿಯನ್ನು ʼಉತ್ತರಾಯಣʼ ಹಾಗೂ ಜುಲೈ 16 ರಿಂದ ಜನವರಿ 14ರ ಅವಧಿಯನ್ನು ʼದಕ್ಷಿಣಾಯನʼ ಎಂದು ಕರೆಯಲಾಗುತ್ತದೆ. ಪುಷ್ಯಮಾಸದಲ್ಲಿ ಬರುವ(ಜನವರಿ 14 ಅಥವಾ 15) ಬರುವ ಸಂಕ್ರಾಮತಿಯನ್ನು ʼಉತ್ತರಾಯಣ ಪುಣ್ಯಕಾಲʼ ಎಂದು ಕರೆಯಲಾಗುತ್ತದೆ. ದೇವರ ಆರಾಧನೆ, ದಾನ, ಧರ್ಮ, ಮತ್ತು ವಿವಾಹಗಳಂತಹ ಕಾರ್ಯಗಳಿಗೆ ಮಂಗಳಕರ ಅವಧಿ ಎಂದು ಕರೆಯಲಾಗುತ್ತದೆ.
Advertisement
Advertisement
ಕೇವಲ ಬದುಕುಕುವುದಕ್ಕೆ ಮಾತ್ರವೇ ಅಲ್ಲ, ಸಾಯುವುದಕ್ಕೂ ಉತ್ತರಾಯಣ (Uttarayana) ಪುಣ್ಯಕಾಲ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.
Advertisement
ಮಕರ ಸಂಕ್ರಾಂತಿಯ (Makar Sankranti) ದಿನದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಆಗತ್ತದೆ ಎಂಬ ನಂಬಿಕೆ. ಉತ್ತರಾಯಣದಲ್ಲಿ ಸೂರ್ಯ ಪಥ ಬದಲಾಗುವುದರಿಂದ ದೇಶದಲ್ಲಿ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ. ಈ ಪುಣ್ಯಕಾಲದಲ್ಲಿ ಗಂಗಾ, ತುಂಗಾ, ಕೃಷ್ಣ, ಕಾವೇರಿ ಸೇರಿದಂತೆ ಪವಿತ್ರ ನದಿಗಳಲ್ಲಿ, ಪುಣ್ಯ ತೀರ್ಥದಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಉತ್ತರಾಯಣವನ್ನು ಪ್ರಾರಂಭಿಸುವ ದಿನವಾದ ಸಂಕ್ರಾತಿಯಂದು ಮಾಡುವ ಸ್ನಾನ, ಧ್ಯಾನ, ಹೋಮ, ಪೂಜೆ, ಇತ್ಯಾದಿ ಶುಭ ಕಾರ್ಯದಲ್ಲಿ ಫಲ ಜಾಸ್ತಿ ಸಿಗುತ್ತದೆ.
Advertisement
ಉತ್ತರ ಭಾರತದಲ್ಲಿ ಸಂಕ್ರಾಂತಿಯಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಲಹಾಬಾದಿನಲ್ಲಿ ಈ ಸಂದರ್ಭದಲ್ಲೇ ಪ್ರಸಿದ್ಧ ಕುಂಭಮೇಳ (Kumbh Mela) ನಡೆಯುತ್ತದೆ.