ನವದೆಹಲಿ: ಭಾರತ್ ಜೋಡೋ ಯಾತ್ರೆಯಲ್ಲಿ (2022 ರಲ್ಲಿ) ವಿನಾಯಕ ದಾಮೋದರ್ ಸಾವರ್ಕರ್ (Savarkar) ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ದಾಖಲಾಗಿದ್ದ ಮಾನನಷ್ಟ (Defamation Case) ಮೊಕದ್ದಮೆಯನ್ನು ನಾಸಿಕ್‌ನ ಕ್ರಿಮಿನಲ್ ನ್ಯಾಯಾಲಯ ಮುಕ್ತಾಯಗೊಳಿಸಿದೆ.
ನಾಸಿಕ್ ಮೂಲದ ನಿರ್ಭಯಾ ಫೌಂಡೇಶನ್ ಅಧ್ಯಕ್ಷ ದೇವೇಂದ್ರ ಭುತಡಾ ಅವರು ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು. 2022ರ ಜೂನ್ 15, 16ರಂದು ಹಿಂಗೋಲಿ ಮತ್ತು ಅಕೋಲೆಯಲ್ಲಿ ನಡೆದ ರ್‍ಯಾಲಿಗಳಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳು ಮಾನಹಾನಿಕರ ಮತ್ತು ಅವಹೇಳನಕಾರಿಯಾಗಿತ್ತು ಎಂದು ಅವರು ಆರೋಪಿಸಿದ್ದರು. ಭುತಡಾ ಅವರ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 499 (ಮಾನನಷ್ಟ) ಮತ್ತು 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಾಸಿಕ್ ನ್ಯಾಯಾಲಯ ಸೆಪ್ಟೆಂಬರ್ 2024ರಲ್ಲಿ ರಾಹುಲ್ ಗಾಂಧಿಯವರಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನೂ ಓದಿ: ಬ್ರಾಹ್ಮಣ ಸಾವರ್ಕರ್ ಅವರು ಮಾಂಸ ಸೇವಿಸುತ್ತಿದ್ದರು: ದಿನೇಶ್ ಗುಂಡೂರಾವ್
ನಂತರ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯ, ವರ್ಚುವಲ್ (ವಿಡಿಯೋ ಕಾನ್ಫರೆನ್ಸಿಂಗ್) ಮೂಲಕ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಿತ್ತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು.
ಸೆಪ್ಟೆಂಬರ್ 2024ರಲ್ಲಿ ನ್ಯಾಯಾಲಯವು ಪ್ರಕರಣದ ತನಿಖೆಗೆ ಆದೇಶಿಸಿತ್ತು. ಪೊಲೀಸರು ತಮ್ಮ ವರದಿಯನ್ನು ಸಲ್ಲಿಸಿದ ನಂತರ, ದೂರುದಾರರು ಪ್ರಕರಣವನ್ನು ಹಿಂಪಡೆಯಲು ಮುಂದಾದರು. ಹಾಗಾಗಿ, ವಿಚಾರಣಾ ನ್ಯಾಯಾಧೀಶರು ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಮುಕ್ತಾಯಗೊಳಿಸಿದರು. ಇದನ್ನೂ ಓದಿ: ಅಂಬೇಡ್ಕರ್ ಸೋಲಿಸುವುದಕ್ಕೆ ಸಾವರ್ಕರ್ ಕಾರಣ – ಪ್ರಿಯಾಂಕ್ ಖರ್ಗೆ, ಅಶ್ವಥ್ ನಾರಾಯಣ್ ನಡುವೆ ದಾಖಲೆ ಜಟಾಪಟಿ

