ಉದ್ಯೋಗ ಸೃಷ್ಟಿಸುವ ಪ್ರಮುಖ ನಾಲ್ಕು ಕ್ಷೇತ್ರಗಳಿಗೆ ಬಜೆಟ್‍ನಲ್ಲಿ ಹೆಚ್ಚಿನ ಒತ್ತು: ಮೋದಿ

Public TV
1 Min Read
PM Modi

ನವದೆಹಲಿ: ಕೃಷಿ, ಮೂಲಸೌಕರ್ಯ, ಜವಳಿ ಮತ್ತು ತಂತ್ರಜ್ಞಾನ ಮುಖ್ಯ ಉದ್ಯೋಗ ಕ್ಷೇತ್ರಗಳಾಗಿವೆ. ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವ ಸಲುವಾಗಿ ಈ ನಾಲ್ಕು ಕ್ಷೇತ್ರಗಳಿಗೆ ಬಜೆಟ್‍ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

2020ರ ಬಜೆಟ್ ಮಂಡನೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ತಂತ್ರಜ್ಞಾನದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವಲ್ಲಿ ಅನೇಕ ಯೋಜನೆಗಳನ್ನು ಈ ಬಾರಿಯ ಬಜೆಟ್‍ನಲ್ಲಿ ತಂದಿದ್ದೇವೆ. ಯುವಕರಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಉದ್ಯೋಗ ಅರಸಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ವಿಶೇಷ ಕೋರ್ಸ್ ಗಳಿಗೆ ಮಹತ್ವ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆದಾಯ ತೆರಿಗೆಯಲ್ಲಿ ಭಾರೀ ಕಡಿತ

ಉದ್ಯೋಗ ಸೃಷ್ಟಿಯಲ್ಲಿ ಬಂಡವಾಳ ಹೂಡಿಕೆ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ವಿದೇಶಿ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಲು ಬಜೆಟ್‍ನಲ್ಲಿ ಮಹತ್ವದ ಯೋಜನೆ ನೀಡಲಾಗಿದೆ. ಅಷ್ಟೇ ಅಲ್ಲದೆ ಹೊಸ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದರು. ಇದನ್ನೂ ಓದಿ: ಕೇಂದ್ರ ಬಜೆಟ್ 2020- ಯಾವುದು ಏರಿಕೆ, ಯಾವುದು ಇಳಿಕೆ?

ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೇಶದಲ್ಲಿ 100 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಗುರಿ ಬಹಳ ಮುಖ್ಯವಾಗಿದೆ. ಪ್ರವಾಸೋದ್ಯಮದಲ್ಲಿ ಕಡಿಮೆ ಹೂಡಿಕೆಯೊಂದಿಗೆ ಉದ್ಯೋಗ, ಆದಾಯ ಗಳಿಸುವ ಸಾಧ್ಯತೆ ಹೆಚ್ಚು. ಆನ್‍ಲೈನ್ ಪರೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಇದು ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ರೈತರಿಗೂ ಈ ಬಾರಿಯ ಬಜೆಟ್‍ನಲ್ಲಿ ಹೆಚ್ಚಿನ ಯೋಜನೆ ನೀಡಲಾಗಿದೆ ಎಂದು ಹೇಳಿದರು.

ದೂರ ದೃಷ್ಟಿ ಮತ್ತು ಕ್ರಿಯಾತ್ಮಕವಾಗಿರುವ ದಶಕದ ಮೊದಲ ಬಜೆಟ್ ಅನ್ನು ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅವರ ತಂಡವನ್ನು ಅಭಿನಂದಿಸುತ್ತೇನೆ ಎಂದು ಮೋದಿ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *