ನವದೆಹಲಿ: ಕಳೆದ ತಿಂಗಳು ಲೋಕಸಭೆಯಿಂದ ಉಚ್ಚಾಟಿತರಾದ ಟಿಎಂಸಿ ಮಾಜಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರಿಗೆ, ಸರ್ಕಾರಿ ಬಂಗಲೆಯನ್ನು ಈ ಕೂಡಲೇ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ.
ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಮೊಯಿತ್ರಾ ಅವರಿಗೆ ಎಸ್ಟೇಟ್ ನಿರ್ದೇಶನಾಲಯ ನೋಟಿಸ್ ನೀಡಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆ
ತೃಣಮೂಲ ಕಾಂಗ್ರೆಸ್ ನಾಯಕಿ ಅವರಿಗೆ ಸಂಸದೆಯಾಗಿ ನೀಡಲಾಗಿದ್ದ ಬಂಗಲೆಯನ್ನು ಕೂಡಲೇ ತೆರವು ಮಾಡುವಂತೆ ಸೂಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಸರ್ಕಾರಿ ಬಂಗಲೆ ಖಾಲಿ ಮಾಡಿಸಲು ಎಸ್ಟೇಟ್ ನಿರ್ದೇಶನಾಲಯದ ಅಧಿಕಾರಿಗಳ ತಂಡವನ್ನು ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ 2023 ರ ಡಿಸೆಂಬರ್ 8 ರಂದು ಉಚ್ಚಾಟನೆ ಮಾಡಲಾಗಿತ್ತು. ಅಲ್ಲದೇ ಜನವರಿ 7 ರ ಒಳಗಾಗಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚಿಸಲಾಗಿತ್ತು. ಇದನ್ನೂ ಓದಿ: ಮಹುವಾ ಮೊಯಿತ್ರಾ ಲೋಕಸಭಾ ಸದಸ್ಯತ್ವ ರದ್ದು – ನೈತಿಕ ಸಮಿತಿ ವರದಿಯಲ್ಲಿ ಏನಿದೆ?
ಸರ್ಕಾರಿ ವಸತಿಯನ್ನು ಏಕೆ ಖಾಲಿ ಮಾಡಿಲ್ಲ ಎಂಬುದಕ್ಕೆ ಮೂರು ದಿನಗಳಲ್ಲಿ ಉತ್ತರವನ್ನು ಕೋರಿ ಜನವರಿ 8 ರಂದು ನೋಟಿಸ್ ನೀಡಲಾಗಿತ್ತು. ಜನವರಿ 12 ರಂದು ಮೊಯಿತ್ರಾ ಅವರಿಗೆ ಮತ್ತೊಂದು ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.