– ನ.26ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರಮಾಣ ಸ್ವೀಕಾರ ಸಮಾರಂಭ?
ಮುಂಬೈ: ಮಹಾರಾಷ್ಟ್ರದ (Maharashtra) 288 ಕ್ಷೇತ್ರಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಭಾರಿ ಬಹುಮತದೊಂದಿಗೆ ಐತಿಹಾಸಿಕ ಗೆಲುವು ಸಾಧಿಸಿದೆ. ಕಳೆದ 50 ವರ್ಷಗಳಲ್ಲಿ ಚುನಾವಣಾ ಪೂರ್ವ ಮೈತ್ರಿ ಇದೇ ಮೊದಲ ಬಾರಿ ಇಂತಹ ಅಭೂತಪೂರ್ವ ಗೆಲುವು ಸಾಧಿಸಿದೆ ಎಂದು ಪ್ರಧಾನಿ ಮೋದಿ (PM Modi) ಬಣ್ಣಿಸಿದ್ದಾರೆ. ಇದೀಗ ಮುಂದಿನ ಸಿಎಂ ಯಾರಾಗ್ತಾರೆ ಅನ್ನೋದು ಕುತೂಹಲ ಹೆಚ್ಚಿಸಿದೆ. ಜೊತೆಗೆ ಪ್ರಬಲ ಖಾತೆಗಳ ಹಂಚಿಕೆ ಯಾರ ತೆಕ್ಕೆಗೆ ಬೀಳಲಿದೆ ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
ಈ ಬೆಳವಣಿಗೆಯ ನಡುವೆ ಮಹಾಯುತಿ (Mahayuti) ಮೈತ್ರಿ ಕೂಟದ ಪಕ್ಷಗಳು ಇಂದು (ಭಾನುವಾರ) ಪ್ರತ್ಯೇಕವಾಗಿ ಉನ್ನತ ಮಟ್ಟದ ಸಭೆಗಳನ್ನ ಕರೆದಿದೆ. ಮೈತ್ರಿಕೂಟದ ಎಲ್ಲ ಪಕ್ಷದ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಸಿಎಂ ಹುದ್ದೆ ಸೇರಿದಂತೆ ಸಂಪುಟದ ಆಯ್ಕೆಯ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಾಹುಲ್ ದಾಖಲೆ ಬ್ರೇಕ್ – ಪ್ರಿಯಾಂಕಾಗೆ 4 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು
ಮುಂಬೈನಲ್ಲಿರುವ ದೇವೇಂದ್ರ ಫಡ್ನವೀಸ್ ಅವರ ಅಧಿಕೃತ ನಿವಾಸದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಇತ್ತ ಏಕನಾಥ್ ಶಿಂಧೆ ಅವರು ಬಾಂದ್ರಾದಲ್ಲಿರುವ ಹೋಟೆಲ್‌ನಲ್ಲಿ ಹೊಸದಾಗಿ ಆಯ್ಕೆಯಾದ ಎಲ್ಲಾ ಶಾಸಕರೊಂದಿಗೆ ಸಭೆ ಕರೆದಿದ್ದಾರೆ. ಏತನ್ಮಧ್ಯೆ, ಎನ್‌ಸಿಪಿ ಅಜಿತ್ ಪವಾರ್ ಬಣವು ಮುಂಬೈನ ಅವರ ಅಧಿಕೃತ ನಿವಾಸ ದೇವಗಿರಿ ಬಂಗಲೆಯಲ್ಲಿ ಸಭೆ ನಡೆಸುತ್ತಿದೆ. ಇಂದು ಪ್ರತ್ಯೇಕ ಸಭೆ ನಡೆಸಿದ ಬಳಿಕ ಸೋಮವಾರ (ನ.25) ಮಹಾಯುತಿಯ ಎಲ್ಲ ಶಾಸಕರು ಒಟ್ಟಾಗಿ ಸಭೆ ಸೇರಲಿದ್ದಾರೆ. ಅಲ್ಲಿಯೇ ಮುಂದಿನ ಸಿಎಂ ಯಾರು ಎಂಬುದು ನಿರ್ಧಾರವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
288 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ 233 ಸ್ಥಾನ ಗೆದ್ದು ಅಧಿಕಾರದ ಗದ್ದುಗೆ ಏರಿದೆ. ಆದ್ರೆ ಘಟಾನುಘಟಿ ನಾಯಕರುಳ್ಳ ಮಹಾ ವಿಕಾಸ್ ಅಘಾಡಿ ಕೇವಲ 49 ಸ್ಥಾನ ಗೆದ್ದು, ಮುಖಭಂಗ ಅನುಭವಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರದ ಮುಂದಿನ ಸಿಎಂ ಯಾರು? – ದೇವೇಂದ್ರ ಫಡ್ನವಿಸ್ ಹೇಳಿದ್ದೇನು?
ಫಡ್ನವಿಸ್ ಆಗ್ತಾರಾ ಸಿಎಂ?
ಈಗಾಗಲೇ ಸಿಎಂ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲರ ಜೊತೆ ಸಮಾಲೋಚನೆ ನಡೆಸಿದ ನಂತರ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಅಮಿತ್ ಶಾ ಮೈತ್ರಿಕೂಟದ ನಾಯಕರಿಗೆ ತಿಳಿಸಿದ್ದಾರೆಂದು ಫಡ್ನವಿಸ್ ಮಾಹಿತಿ ನೀಡಿದ್ದಾರೆ.
2022 ರಲ್ಲಿ 40 ಶಾಸಕರೊಂದಿಗೆ ಏಕನಾಥ್ ಶಿಂಧೆ ಅವರು ಬಿಜೆಪಿ ಮನೆ ಬಾಗಿಲಿಗೆ ಹೋದರು. ಶಿವಸೇನೆಯ ವಿಭಜನೆಯಿಂದಾಗಿ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಪರಿಣಾಮ ಎಂವಿಎ ಸರ್ಕಾರ ಪತನಗೊಂಡಿತು. ಇದನ್ನೂ ಓದಿ: ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದಿದೆ: ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿಗೆ ಮೋದಿ ಕೃತಜ್ಞತೆ
ಮುಂದೆ ಬಿಜೆಪಿ ನೇತೃತ್ವದಲ್ಲಿ ಮಹಾಯುತಿ ಮೈತ್ರಿಕೂಟ ಅಧಿಕಾರಕ್ಕೆ ಬರಲು ವೇದಿಕೆ ಸಜ್ಜಾಯಿತು. ಆಗ ಪಕ್ಷದಲ್ಲಿ ಅನುಭವಿ ವ್ಯಕ್ತಿಯಿದ್ದರೂ ಬಿಜೆಪಿ ಅಚ್ಚರಿ ಎಂಬಂತೆ ಏಕನಾಥ್ ಶಿಂಧೆ ಅವರನ್ನೇ ಮಹಾರಾಷ್ಟ್ರ ಸಿಎಂ ಮಾಡಿತು. ಇದರ ನಡುವೆ ಎನ್‌ಸಿಪಿ ಕೂಡ ಇಬ್ಭಾಗವಾಗಿ ಅಜಿತ್ ಪವಾರ್ ಬಣ ಬಿಜೆಪಿ ಜೊತೆ ಕೈಜೋಡಿಸಿತು.
ಬಿಜೆಪಿ ಪ್ರಚಾರದ ನೇತೃತ್ವ ವಹಿಸಿದ್ದ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ. ಪ್ರಬಲ ಮರಾಠ ನಾಯಕನಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ಏಕನಾಥ್ ಶಿಂಧೆ ಮತ್ತು 81 ಪ್ರತಿಶತದಷ್ಟು ಪ್ರಭಾವಶಾಲಿ ಸ್ಟ್ರೈಕ್ ರೇಟ್ ಸಾಧಿಸಿದ ಅವರು ಉನ್ನತ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ.
ನ.26ರಂದು ಪ್ರಮಾಣ ವಚನ ಸ್ವೀಕಾರ:
ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ನವೆಂಬರ್ 26ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ದೇವೇಂದ್ರ ಫಡ್ನವಿಸ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.