ಯಾದಗಿರಿ: ಮಹಾತ್ಮ ಗಾಂಧಿ ಹೆಸರಿನ ವೃತ್ತಗಳು, ಭವನಗಳು, ರಸ್ತೆಗಳ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈ ಗ್ರಾಮದಲ್ಲಿ ಜನ ಮಹಾತ್ಮ ಗಾಂಧಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಿದ್ದಾರೆ.
ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ್ ಗ್ರಾಮದಲ್ಲಿ ಮಹಾತ್ಮಾ ಗಾಂಧೀಜಿ ದೇವಸ್ಥಾನವಿದೆ. ಕೇವಲ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಮಾತ್ರವಲ್ಲ, ದಿನ ನಿತ್ಯ ಬಾಪೂಜಿಗೆ ಗ್ರಾಮಸ್ಥರು ಪೂಜೆ ಮಾಡಿ ಮಹಾತ್ಮನನ್ನು ಸ್ಮರಿಸುತ್ತಾರೆ.
Advertisement
Advertisement
ಬಲಶೆಟ್ಟಿಹಾಳ ಗ್ರಾಮಸ್ಥರು ಗಾಂಧೀಜಿ ಮೇಲಿನ ಅಭಿಮಾನದಿಂದ ಸ್ವಾತಂತ್ರ್ಯಾನಂತರ 1948ರಲ್ಲಿ ಈ ದೇವಸ್ಥಾನ ನಿರ್ಮಿಸಿದ್ದಾರೆ. ಇಲ್ಲಿನ ಆದರ್ಶ ಶಿಕ್ಷಕ ದಿ.ಹಂಪಣ್ಣ ಸಾಹುಕಾರ್ ಎನ್ನುವವರು, ಸ್ವತಃ ಗಾಂಧೀಜಿ ಅವರ ಪುತ್ಥಳಿ ತಯಾರಿಸಿ, ದೇವಸ್ಥಾನ ನಿರ್ಮಿಸಿದ್ದಾರಂತೆ. ಅಂದಿನಿಂದ ಇಂದಿನವರೆಗೆ ಇಲ್ಲಿನ ಗ್ರಾಮಸ್ಥರು ಗಾಂಧೀಜಿಯವರ ಈ ಪುತ್ಥಳಿಗೆ ದೇವತಾ ಸ್ಥಾನಮಾನ ನೀಡಿ, ಇತರೆ ದೇವಸ್ಥಾನಗಳಲ್ಲಿ ನಿತ್ಯ ಪೂಜೆ ನಡೆಯುವಂತೆ ಈ ದೇವಸ್ಥಾನದಲ್ಲೂ ಸುಮಾರು 70 ವರ್ಷಗಳಿಂದ ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ.
Advertisement
ಬಲಶೆಟ್ಟಿಹಾಳ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿಯೇ ಗಾಂಧಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಶಾಲಾ ಮಕ್ಕಳು ದಿನ ಮಹಾತ್ಮ ಗಾಂಧಿಜೀಯವರ ಮೂರ್ತಿಯನ್ನು ಸ್ವಚ್ಛಗೊಳಿಸಿ ಅದಕ್ಕೆ ಪುಷ್ಪಾಲಂಕಾರಗಳಿಂದ ಸಿಂಗರಿಸಿ ಪೂಜೆ ಮಾಡುತ್ತಾರೆ. ಅಲ್ಲದೆ ಈ ಗ್ರಾಮದ ಯಾವುದೇ ಸಮಸ್ಯೆಗಳನ್ನು ಮತ್ತು ನ್ಯಾಯ ಪಂಚಾಯತಿಗಳನ್ನು, ಇದೇ ಗಾಂಧಿ ದೇವಸ್ಥಾನದ ಕಟ್ಟೆಯಲ್ಲೇ ಇಲ್ಲಿನ ಗ್ರಾಮಸ್ಥರು ಬಗೆಹರಿಸಿಕೊಳ್ಳುತ್ತಾರೆ. ಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸೆಯ ನಿಷ್ಠೆಯ ತತ್ವ ಸಾರುವ ಕೆಲಸಗಳು ಇಲ್ಲಿ ನಡೆಯುತ್ತವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
Advertisement
ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಅಹಿಂಸೆಯ ಮೂಲಕ ರಕ್ಷಿಸಿದ ಮಹಾತ್ಮ ಗಾಂಧೀಜಿಯವರನ್ನು ದೇವರ ಸ್ಥಾನದಲ್ಲಿಟ್ಟು, ದೇವಾಲಯ ಕಟ್ಟಿ ಎಲ್ಲ ದೇವರಿಗೆ ಪೂಜಿಸುವಂತೆ, ನಿತ್ಯ ಪೂಜಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.