ರಾಯಚೂರು: ಮಹಾಶಿವರಾತ್ರಿ (Mahashivratri) ಅಂಗವಾಗಿ ರಾಯಚೂರಿನಲ್ಲಿ ಮಧ್ಯರಾತ್ರಿಯಿಂದಲೇ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನ ನೆರವೇರಿಸಲಾಗುತ್ತಿದೆ. ನಗರದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಮಧ್ಯರಾತ್ರಿಯಿಂದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವಲಿಂಗ (Shivalinga) ದರ್ಶನ ಪಡೆಯುತ್ತಿದ್ದಾರೆ.

ಶಿವ ಮಾಲಾಧಾರಿಗಳು ನಿರಂತರ ಶಿವನಾಮಸ್ಮರಣೆ, ಶಿವ ಭಜನೆ ಮಾಡುತ್ತಿದ್ದಾರೆ. ನಿರಂತರ ಮಹಾರುದ್ರಾಭಿಷೇಕ, ಪಂಚಾಮೃತಾಭಿಷೇಕ, ಬಿಲ್ವಾರ್ಚನೆ ಸೇರಿ ವಿವಿಧ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಗುತ್ತಿದೆ. ದೇವಾಲಯದಲ್ಲಿ ಈ ಬಾರಿ ವಿಶೇಷವಾಗಿ ಪಾರ್ವತಿ ಪರಮೇಶ್ವರ ಕಲ್ಯಾಣೋತ್ಸವ ಆಯೋಜಿಸಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಭಗವಂತನ ದರ್ಶನಕ್ಕಾಗಿ ಪರದಾಟ ನಡೆಸಿದ್ದಾರೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಭಕ್ತರು ಶಿವಲಿಂಗ ದರ್ಶನ ಪಡೆಯುತ್ತಿದ್ದಾರೆ. ನಗರದ ನಂದೀಶ್ವರ, ರಾಮಲಿಂಗೇಶ್ವರ, ಕೊದಂಡರಾಮ ದೇವಾಲಯದಲ್ಲೂ ವಿಶೇಷಗಳನ್ನ ನೆರವೇರಿಸಲಾಗುತ್ತಿದೆ. ಮಹಾಮಂಗಳಾರತಿ ,ಸಂಜೆ ಭಜನೆ,ರಾತ್ರಿ ಪೂರಾ ಜಾಗರಣೆ ಕಾರ್ಯಕ್ರಮಗಳನ್ನ ಶಿವ ದೇವಾಲಯಗಳಲ್ಲಿ ಆಯೋಜಿಸಲಾಗಿದೆ.

