ಬಿಲ್ವ ಪತ್ರೆ ಶಿವನಿಗೆ ಪ್ರಿಯವಾದದ್ದು. ಸಾಧಾರಣವಾಗಿ ಎಲ್ಲಾ ಶಿವ ಕ್ಷೇತ್ರದಲ್ಲಿ ಬಿಲ್ವ ವೃಕ್ಷವಿರುತ್ತದೆ. ಇದು ಮುಳ್ಳುಗಳಿರುವ ಸುವಾಸಿತ ವೃಕ್ಷ. ಇದರ ಎಲೆ ತ್ರಿದಳಗಳಿಂದ ಕೂಡಿರುತ್ತದೆ. ಇದು ಶಿವನ ಮೂರು ಕಣ್ಣುಗಳನ್ನು ಸೂಚಿಸುತ್ತದೆ.
ತ್ರಿಕೋನಾಕೃತಿಯ ಎಲೆಗಳು ಅಥವಾ ಬಿಲ್ವ ವೃಕ್ಷದ 3 ಚಿಗುರೆಲೆಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಏಕೆಂದರೆ ಅವು ಶಿವನಿಗೆ ಬಹಳ ಪ್ರಿಯವಾಗಿವೆ. ಬಿಲ್ವ ಮರವನ್ನು ಶಿವನ ರೂಪವೆಂದು ಪರಿಗಣಿಸಲಾಗಿದೆ. ಬಿಲ್ವಪತ್ರೆಯನ್ನು ಅರ್ಪಿಸದೆ ಮಾಡುವ ಶಿವನ ಆರಾಧನೆಯು ಫಲವಿಲ್ಲವೆಂದೂ ಹೇಳಲಾಗುತ್ತದೆ.
ಪಾರ್ವತಿಯ ಬೆವರ ಹನಿಯಲ್ಲಿ ಚಿಗುರಿದ ವೃಕ್ಷ
ಮಂದರ ಪರ್ವತ ಏರಿದ ಪಾರ್ವತಿ ದೇವಿಗೆ ಆಯಾಸವಾಗಿತ್ತು. ಆಗ ಆಕೆ ಅಲ್ಲಿ ವಿಶ್ರಾಂತಿಗೆ ಕುಳಿತಿದ್ದಳು. ಆಗ ಆಕೆಯ ಬೆವರ ಹನಿ ಭೂಮಿಯ ಮೇಲೆ ಬಿತ್ತು. ಆ ಹನಿಯಿಂದ ಮೂಡಿದ ವೃಕ್ಷವೇ ಬಿಲ್ವ ವೃಕ್ಷ, ಹಾಗಾಗಿಯೇ ಶಿವನಿಗೆ ಅದರ ಮೇಲೆ ಪ್ರೀತಿ ಎಂಬ ಕತೆ ಇದೆ.
ಸಮುದ್ರ ಮಂಥನದಲ್ಲಿ ಹುಟ್ಟಿದ ಬಿಲ್ವ ವೃಕ್ಷ
ಮತ್ತೂಂದು ಕತೆಯಲ್ಲಿ ದೇವ-ದಾನವರು ಅಮೃತಕ್ಕಾಗಿ ಕ್ಷೀರ ಸಾಗರವನ್ನು ಮಂಥನ ಮಾಡುತ್ತಿದ್ದಾಗ, ಆ ಕ್ಷೀರ ಸಾಗರದಿಂದ ಸಾಕಷ್ಟು ಅನರ್ಘ್ಯ ರತ್ನಗಳು ಸೃಷ್ಟಿಯಾದವು. ಅವುಗಳ ಜೊತೆ ಮಹಾಲಕ್ಷ್ಮೀಯೂ ಬಂದಳು. ಆ ಮಹಾಲಕ್ಷ್ಮಿಯನ್ನು ಕಂಡು ದೈತ್ಯರು ಲಕ್ಷ್ಮಿಯ ಮೇಲೆ ಕಣ್ಣು ಹಾಕಿದರು, ಆಕೆಯನ್ನ ಶತಾಯ ಗತಾಯ ಪಡೆಯುವ ಪ್ರಯತ್ನ ಮಾಡಿದರು. ಆಗ ಬೆಚ್ಚಿ ಬಿದ್ದ ಮಹಾಲಕ್ಷ್ಮಿ ಬಿಲ್ವವೃಕ್ಷವಾಗಿ ನೆಲೆ ನಿಂತಳು. ಹಾಗಾಗಿ ಬಿಲ್ವ ವೃಕ್ಷ ಶ್ರೇಷ್ಠ ವೃಕ್ಷವಾಯ್ತು ಎನ್ನುವ ಕಥೆ ಇದೆ.
ಬಿಲ್ವದ ಮಹತ್ವ
ಬಿಲ್ವ ಪತ್ರೆಯಲ್ಲಿ ಮೂರು ದಳಗಳಿರುತ್ತವೆ. ಆ ಮೂರು ದಳಗಳು ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಸಂಕೇತ. ಅಷ್ಟೇ ಅಲ್ಲ, ಪ್ರಾತ: ಕಾಲ, ಮಧ್ಯಾಹ್ನ ಕಾಲ, ಸಂಧ್ಯಾ ಕಾಲಗಳ ಸಂಕೇತವಾಗಿದೆ.
ಶಿವನಿಗೇಕೆ ಬಿಲ್ವ?
ಬಿಲ್ವ ಪತ್ರೆಯಿಂದ ನಾವು ಶಿವನನ್ನು ಪೂಜಿಸುತ್ತೇವೆ. ಶಿವ ಎಂದರೆ ಮಂಗಳಕರ. ನಮಗೆ ಮಂಗಳವಾಗಬೇಕಾದರೆ ನಾವು ಸತ್ವ-ರಜಸ್ಸು-ತಮೋಗುಣಗಳನ್ನ ದಾಟಬೇಕು ಎಂಬ ಪಾಠವನ್ನು ಬಿಲ್ವ ಪತ್ರೆಯಿಂದ ಕಲಿಯುತ್ತೇವೆ. ಅವನ ಸಂಕಲ್ಪದ ಹೊರತಾಗಿ ಜಗತ್ತಿಲ್ಲ ಎಂಬ ಭಾವದಲ್ಲಿ ಬಿಲ್ವ ಪತ್ರೆಯನ್ನು ಸಮರ್ಪಿಸಿದರೆ ಖಂಡಿತಾ ಶಿವನ ಅನುಗ್ರಹವಾಗುತ್ತದೆ ಎಂಬ ನಂಬಿಕೆ ಇದೆ.