ಶಿವರಾತ್ರಿ (Shivratri) ದಿನ ಹೂವುಗಳಿಗೆ ಬಹಳ ಬೇಡಿಕೆ ಇರುತ್ತದೆ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಹೂವಿನಿಂದ (Flowers) ಶಿವನನ್ನು (Shiva) ಅಲಂಕರಿಸಲಾಗುತ್ತದೆ. ಆದರೆ ಹೂವಿನ ಅಲಂಕಾರ ಸೇವೆಯಲ್ಲಿ ಕೇದಗೆ ಹೂವಿಗೆ (Kedige Flower) ಅವಕಾಶವಿಲ್ಲ
ಹೌದು. ಶಿವರಾತ್ರಿ ದಿನ ಕೇದಗೆ ಹೂವಿನ ಬಳಕೆಗೆ ನಿಷೇಧವಿದೆ. ನಿಷೇಧ ಯಾಕೆಂದರೆ ಅದಕ್ಕೂ ಒಂದು ಪುರಾಣ ಕಥೆಯಿದೆ.
ಕಥೆ ಏನು?
ಒಂದು ದಿನ ಕ್ಷೀರಸಾಗರದಲ್ಲಿ ಲಕ್ಷ್ಮಿಯಿಂದ ವಿಷ್ಣು (Vishnu) ಕಾಲನ್ನು ಒತ್ತಿಸಿಕೊಳ್ಳುತ್ತಿದ್ದ. ಈ ಸಮಯದಲ್ಲಿ ಬ್ರಹ್ಮ (Brahma) ಆಕಸ್ಮಿಕವಾಗಿ ಅಲ್ಲಿಗೆ ಆಗಮಿಸಿದ. ಸೃಷ್ಟಿಕರ್ತನಾದ ನಾನು ಬಂದರೂ ಸ್ವಾಗತ, ಗೌರವ ನೀಡದ್ದಕ್ಕೆ ಬ್ರಹ್ಮನಿಗೆ ಸಿಟ್ಟು ಬಂದು ಆಕ್ಷೇಪಿಸಿದ. ಇದಕ್ಕೆ ವಿಷ್ಣು ನನ್ನ ಹೊಕ್ಕುಳದಿಂದಲೇ ಹುಟ್ಟಿದ ನಿನಗೆ ಯಾಕೆ ನಾನು ಗೌರವ ಕೊಡಬೇಕು ಎಂದು ಮರು ಪ್ರಶ್ನೆಹಾಕಿದ.
ಆರಂಭದಲ್ಲಿ ತೆಗಳಿಕೆಯಿಂದ ಆರಂಭವಾದ ಮಾತು ನಂತರ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಎಂಬ ವಿಚಾರಕ್ಕೆ ತಿರುಗಿತು. ಸೃಷ್ಟಿ ಮತ್ತು ಸ್ಥಿತಿಯ ಜವಾಬ್ದಾರಿ ಹೊತ್ತ ಇಬ್ಬರು ನಿರಂತರವಾಗಿ ವಾದ ಮಾಡುತ್ತಿದ್ದರೆ ವ್ಯವಸ್ಥೆ ಅಸ್ತವ್ಯಸ್ತವಾಗಬಹುದು ಎಂಬದುನ್ನು ಅರಿತ ದೇವತೆಗಳು ಇಬ್ಬರನ್ನೂ ಸಮಾಧಾನ ಮಾಡಲು ಮುಂದಾಗುತ್ತಾರೆ. ಇದನ್ನೂ ಓದಿ: Shivaratri Speical: ಶಿವಭಕ್ತಿಗೆ ಒಲಿದ ಆಸ್ಟ್ರೇಲಿಯಾ – ಮುಕ್ತಿ ಗುಹೇಶ್ವರ ದೇವಾಲಯದಲ್ಲಿ ಹಲವು ವಿಶೇಷ!
ದೇವತೆಗಳ ಸಮಾಧಾನಕ್ಕೆ ಇಬ್ಬರು ಬಗ್ಗದೇ ವಾಗ್ವಾದ ಮುಂದುವರಿಸುತ್ತಲೇ ಇದ್ದರು. ಕೊನೆಗೆ ಇವರಿಬ್ಬರ ಮಧ್ಯೆ ನಡೆಯುತ್ತಿರುವ ವಾದವನ್ನು ನಿಲ್ಲಿಸುವ ಏಕೈಕ ಶಕ್ತಿ ಇರುವುದು ಶಿವನಿಗೆ ಮಾತ್ರ ಎಂದು ಭಾವಿಸಿ ದೇವತೆಗಳು ಲಯ ಕರ್ತೃನ ಮುಂದೆ ಹೋಗಿ ಮೊರೆ ಇಡುತ್ತಾರೆ.
ದೇವತೆಗಳ ಪ್ರಾರ್ಥನೆಯನ್ನು ಒಪ್ಪಿಕೊಂಡರೂ ಇಬ್ಬರ ಜಗಳ ನಿಲ್ಲಿಸುವುದು ಹೇಗೆ ಎಂದು ಶಿವ ಆಲೋಚಿಸತೊಡಗಿದ. ಕೊನೆಗೆ ವಿಷ್ಣು ಮತ್ತು ಬ್ರಹ್ಮನ ಮಧ್ಯೆ ಕಣ್ಣುಕೋರೈಸುವ ಜ್ಯೋತಿಸ್ತಂಭವಾಗಿ ನಿಂತುಬಿಟ್ಟ. ನಂತರ ಇಬ್ಬರನ್ನು ಉದ್ದೇಶಿಸಿ, ನೀವಿಬ್ಬರೂ ವಾದ ಮಾಡುತ್ತಲೇ ಇದ್ದರೆ ಯಾರು ಶ್ರೇಷ್ಠ ಎನ್ನುವುದು ತಿಳಿಯಲು ಸಾಧ್ಯವಿಲ್ಲ. ಮೂರನೇ ವ್ಯಕ್ತಿ ಮಾತ್ರ ತೀರ್ಪು ನೀಡಲು ಸಾಧ್ಯ. ಹೀಗಾಗಿ ನಿಮಗೆ ನಾನೊಂದು ಪರೀಕ್ಷೆ ಕೊಡುತ್ತೇನೆ. ಈ ಪರೀಕ್ಷೆಯಲ್ಲಿ ಯಾರು ಯಶಸ್ವಿಯಾಗುತ್ತಾರೋ ಅವರು ಶ್ರೇಷ್ಠ ಎಂದು ಹೇಳುತ್ತಾನೆ. ಈ ಪರೀಕ್ಷೆಯನ್ನು ಸ್ವೀಕರಿಸುವುದಾಗಿ ಇಬ್ಬರು ಒಪ್ಪಿಕೊಳ್ಳುತ್ತಾರೆ. ಇದನ್ನೂ ಓದಿ: ಮಹಾಶಿವರಾತ್ರಿಯಲ್ಲಿ ಜಾಗರಣೆಗಿರುವ ಮಹತ್ವವೇನು?
ಈಗಲೇ ನೀವಿಬ್ಬರೂ ಈ ಕಂಬದ ತುದಿಗಳು ಎಲ್ಲಿದೆ ಎಂದು ಪತ್ತೆ ಹಚ್ಚಿಕೊಂಡು ಬನ್ನಿ. ಯಾರು ಮೊದಲು ಪತ್ತೆ ಮಾಡುತ್ತಾರೋ ಅವರೇ ಶ್ರೇಷ್ಠರು ಎಂದು ಶಿವ ಹೇಳುತ್ತಾನೆ. ಕೂಡಲೇ ಬ್ರಹ್ಮ ಹಂಸರೂಪವನ್ನು ಧರಿಸಿ ಕಂಬದ ಮೇಲ್ತುದಿಯನ್ನು ಹುಡುಕಲು ಹೊರಟರೆ ವಿಷ್ಣು ಹಂದಿಯ ರೂಪ ಧರಿಸಿ ಕೆಳಭಾಗವನ್ನು ತಲುಪಲು ಹೋಗುತ್ತಾನೆ. ಬಹಳ ದೂರದವರೆಗೂ ಹೋದರೂ ತುದಿ ಸಿಗದ ಕಾರಣ ವಿಷ್ಣು ಮರಳಿ ಬರುತ್ತಾನೆ.
ಬ್ರಹ್ಮ ಮೇಲಕ್ಕೆ ಹೋಗುತ್ತಿದ್ದಂತೆ ಗಾಳಿಯಲ್ಲಿ ಹಾರಿಕೊಂಡು ಒಂದು ಕೇದಗೆ ಹೂ ಬರುತ್ತಿರುತ್ತದೆ. ಈ ವೇಳೆ, ನೀನು ಎಲ್ಲಿಂದ ಬಂದೆ ಎಂದು ಬ್ರಹ್ಮ ಕೇಳಿದಾಗ ನಾನು ಶಿವನ ತುತ್ತ ತುದಿಯಿಂದ ಜಾರಿ ಬೀಳುತ್ತಿದ್ದೇನೆ ಎಂದು ಹೇಳಿತು. ಬ್ರಹ್ಮನಿಗೆ ಸಂತೋಷವಾಗಿ ಕೇದಗೆ ಹೂವನ್ನು ಹಿಡಿದುಕೊಂಡು ಶಿವನಿದ್ದಲ್ಲಿಗೆ ಮರಳಿದ. ಗೆಲುವಿನ ಹುಮ್ಮಸ್ಸಿನಲ್ಲಿ ಬ್ರಹ್ಮ, ನಾನು ಮೇಲ್ತುದಿಯನ್ನು ನೋಡಿದ್ದೇನೆ. ಇದಕ್ಕೆ ಈ ಕೇದಗೆ ಹೂವೇ ಸಾಕ್ಷಿ ಎಂದ.
ಸುಳ್ಳು ಹೇಳಿದ್ದನ್ನು ಕಂಡು ಸಿಟ್ಟಾದ ಶಿವ, ಇನ್ನು ಮುಂದೆ ನಿನ್ನನ್ನು ಯಾರೂ ಪೂಜೆಸಬಾರದು ಎಂದು ಬ್ರಹ್ಮನಿಗೆ ಶಾಪ ನೀಡಿದ. ಜೊತೆಗೆ ಸುಳ್ಳು ಸಾಕ್ಷಿ ಹೇಳಿದ್ದಕ್ಕೆ ಯಾರದೇ ಪೂಜೆಯಲ್ಲೂ ನಿನ್ನನ್ನು ಸೇರಿಸಬಾರದು ಎಂಬುದಾಗಿ ಶಪಿಸಿದ. ತನ್ನ ತಪ್ಪಿನ ಅರಿವಾದಂತೆ ಕೇದಗೆ ಅಂಗಲಾಚಿ ಬೇಡಿದ್ದರಿಂದ ಶಿವ, ನನ್ನ ಪೂಜೆಗೆ ನೀನು ಅರ್ಹನಲ್ಲ. ಆದರೆ ನನ್ನ ಆಭರಣ ಸರ್ಪರಾಜ ವಾಸುಕಿಯ ಪೂಜೆ ಅಂದರೆ ನಾಗನ ಪೂಜೆ ನೀನು ಅರ್ಹ ಎಂದು ಹೇಳಿ ಶಾಪದ ತೀವ್ರತೆಯನ್ನು ತಗ್ಗಿಸಿದ.
ಈ ಕಥೆಯಂತೆ ದೇಶದೆಲ್ಲೆಡೆ ತ್ರಿಮೂರ್ತಿಗಳ ಪೈಕಿ ಶಿವ ಮತ್ತು ವಿಷ್ಣುವಿಗೆ ದೇವಸ್ಥಾನವಿದೆ ಬ್ರಹ್ಮನಿಗೆ ಇಲ್ಲ. ಇದರೊಂದಿಗೆ ನಾಗರ ಪಂಚಮಿಯಂದು ಕೇದಗೆ ಬಹಳ ಮುಖ್ಯ. ಬಹಳಷ್ಟು ಕಡೆ ಪ್ರಸಾದ ರೂಪದಲ್ಲಿ ಕೇದಗೆಯನ್ನೇ ನೀಡಲಾಗುತ್ತದೆ.