ಕಲಬುರಗಿ: ತೊಗರಿ ಕಣಜ ಖ್ಯಾತಿಯ ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಶಿವರಾತ್ರಿ ನಿಮಿತ್ತ ತೊಗರಿಯಲ್ಲಿಯೇ ಬೃಹತ್ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದ್ದು, ಇದು ಇದೀಗ ಅಲ್ಲಿನ ಶಿವನ ಆರಾಧಕರ ಪ್ರೇಕ್ಷಣೀಯ ಸ್ಥಳವಾಗಿದೆ. ಆ ಶಿವಲಿಂಗವನ್ನು ನೋಡಲು ಎರಡು ಕಣ್ಣುಗಳು ಸಾಲದಂತಿದೆ. ಒಟ್ಟು 25 ಅಡಿ ಎತ್ತರದ ಈ ಶಿವಲಿಂಗಕ್ಕೆ ಸುಮಾರು 3 ಕ್ವಿಂಟಾಲ್ ತೊಗರಿಯನ್ನು ಬಳಸಿ ಈ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಈ ಭಾಗದ ಪ್ರಮುಖ ಬೆಳೆಯಾದ ತೊಗರಿಯಲ್ಲಿ ಶಿವಲಿಂಗ ಅರಳಿಸುವ ಮೂಲಕ ಈ ಭಾಗದ ರೈತಾಪಿ ವರ್ಗದ ಜೊತೆ ಶಿವನ ಆರಾಧಕರ ಮೆಚ್ಚುಗೆಗೆ ಪಾತ್ರವಾಗಿದೆ.
ತೊಗರಿಯಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿರುವ ಹಿನ್ನೆಲೆ ತಂಡೋಪತಂಡವಾಗಿ ಜನ ಆಗಮಿಸಿ ಶಿವನ ದರ್ಶನ ಪಡೆಯುತ್ತಿದ್ದಾರೆ. ಅದರಲ್ಲಿಯೂ ಇಂದು ಶಿವರಾತ್ರಿ ನಿಮಿತ್ತ ಸುಮಾರು 5 ಸಾವಿರಕ್ಕೂ ಹೆಚ್ಚು ಶಿವಭಕ್ತರು ಶಿವನ ದರ್ಶನಕ್ಕೆ ಆಗಮಿಸಲಿದ್ದಾರೆ. ತೊಗರಿಯಲ್ಲಿ ಶಿವಲಿಂಗ ಸ್ಥಾಪಿಸುವ ಮೂಲಕ ಈ ಭಾಗದ ಅನ್ನದಾತನನ್ನು ಸಹ ಶಿವನಲ್ಲಿ ಕಾಣಬಹುದು. ಯಾಕಂದ್ರೆ ಶಿವ ಶೃಂಗಾರ ಪ್ರಿಯನಲ್ಲ. ಆದರೆ ಶಿವ ಭಕ್ತರು ಶಿವನನ್ನು ವಿವಿಧ ರೂಪದಲ್ಲಿ ಶೃಂಗರಿಸಿ ಆನಂದ ಪಡುತ್ತಾರೆ. ಹೀಗಾಗಿ ನಾವು ಸಹ ಈ ಬಾರಿ ಶಿವನನ್ನು ತೊಗರಿ ರೂಪದಲ್ಲಿ ಶೃಂಗರಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿರುವುದಾಗಿ ಬ್ರಹ್ಮಕುಮಾರಿ ಆಶ್ರಮದ ಮುಖ್ಯಸ್ಥರು ಹೇಳುತ್ತಾರೆ.
ಸದ್ಯ ಹೀಗೆ ನಿರ್ಮಿತವಾದ ಈ ಶಿವಲಿಂಗ ಇದೀಗ ಕಲಬುರಗಿ ಹಾಗು ಸುತ್ತಲಿನ ಜಿಲ್ಲೆಗಳಲ್ಲಿ ಭಕ್ತರ ಆಕರ್ಷಣೆಗೆ ಕಾರಣವಾಗಿದೆ. ಶಿವನ ದಿನವೇ ಆದ ಶಿವರಾತ್ರಿ ಸಮಯದಲ್ಲಿ ಇದನ್ನು ನಿರ್ಮಿಸಿರುವದು ಶಿವ ಭಕ್ತರಲ್ಲಿ ಸಂತಸ ತರಿಸಿದೆ.