ಮುಂಬೈ: ಮಹಾರಾಷ್ಟ್ರದ (Maharashtra) ಪಾಲ್ಘರ್‌ನಲ್ಲಿ ಮಹಿಳೆಯೊಬ್ಬಳು (Woman) ಜಗಳದ ವೇಳೆ ‘ಸ್ತ್ರಿಧನ್’ (ವಿವಾಹದ ವೇಳೆ ಪೋಷಕರು ಅಥವಾ ಅತ್ತೆಯಿಂದ ಮಹಿಳೆ ಪಡೆಯುವ ಚರ ಅಥವಾ ಸ್ಥಿರ ಆಸ್ತಿಗಳು) ಹಿಂದಿರುಗಿಸುವಂತೆ ಒತ್ತಾಯಿಸಿದ್ದಕ್ಕೆ ಗಂಡ (Husband) ಮತ್ತು ಅವನ ಸಹೋದರಿ ಸೇರಿ ಆಕೆಯನ್ನು ಹತ್ಯೆ ಮಾಡಿದ್ದಾರೆ.
ಹತ್ಯೆಯಾದ (Murder) ಮಹಿಳೆಯನ್ನು ಕಲ್ಪನಾ ಸೋನಿ (35) ಎಂದು ಗುರುತಿಸಲಾಗಿದೆ. ಈಕೆ 2015 ರಲ್ಲಿ ಮಹೇಶ್ ಸೋನಿಯನ್ನು (38) ವಿವಾಹವಾಗಿದ್ದರು. ಬಳಿಕ ವಿರಾರ್‌ನಲ್ಲಿ ವಾಸಿಸುತ್ತಿದ್ದರು. ಆಗಾಗ ಮಹಿಳೆ ಮತ್ತು ಆಕೆಯ ಅತ್ತೆಯ ನಡುವೆ ಗಲಾಟೆ ಆಗುತ್ತಿದ್ದು. ಈ ವೇಳೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮರಾಠಿ ಮಾತನಾಡದಿದ್ದಕ್ಕೆ 6 ವರ್ಷದ ಮಗಳನ್ನೇ ಕೊಂದ ತಾಯಿ!
ಡಿ.27 ರಂದು ಸಹ ಮಹಿಳೆ ಹಾಗೂ ಆಕೆಯ ಅತ್ತೆಯ ನಡುವೆ ಜಗಳ ನಡೆದಿತ್ತು. ಈ ವೇಳೆ ಮಹಿಳೆ ತಾನು ಮನೆ ಬಿಟ್ಟು ಹೋಗುವುದಾಗಿ ಹೇಳಿದ್ದಳು. ಅಲ್ಲದೇ ತನಗೆ ಸೇರಬೇಕಾದ ‘ಸ್ತ್ರಿಧನ್’ನ್ನು ವಾಪಸ್ ಕೊಡುವಂತೆ ಒತ್ತಾಯಿಸಿದ್ದಳು. ಆಕೆಯ ಬೇಡಿಕೆಯಿಂದ ಕೋಪಗೊಂಡ ಮಹೇಶ್ ಮತ್ತು ಆತನ ಸಹೋದರಿ ದೀಪಾಲಿ ಸೋನಿ, ಹರಿತವಾದ ಆಯುಧದಿಂದ ಕಲ್ಪನಾಳ ತಲೆಯ ಮೇಲೆ ಹಲ್ಲೆ ನಡೆಸಿದ್ದಾರೆ.
ನೆರೆಹೊರೆಯವರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಕಲ್ಪನಾ ಶೌಚಾಲಯದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ. ಆದಾಗ್ಯೂ, ತೀವ್ರವಾದ ಹೊಡೆತಗಳಿಂದಾಗಿ ಸಾವು ಸಂಭವಿಸಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ದಂಪತಿಗೆ 7 ವರ್ಷದ ಮಗಳಿದ್ದು, ಘಟನೆಯ ಸಮಯದಲ್ಲಿ ಆಕೆ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಮಹೇಶ್ ಮತ್ತು ದೀಪಾಲಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಿ ಜ.2 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದನ್ನೂ ಓದಿ: ಓವರ್‌ಲೋಡ್ ಆಗಿದ್ದ ಟ್ರಕ್ ಪಲ್ಟಿ – ಬೊಲೆರೋ ಅಪ್ಪಚ್ಚಿ, ಚಾಲಕ ಸಾವು

