– ರಕ್ಷಿಸಲು ಹೋದ ಪೊಲೀಸರ ಮೇಲೆ ಹಲ್ಲೆ
ಮುಂಬೈ: ಕಳ್ಳರೆಂದು ಶಂಕಿಸಿ ಮೂವರನ್ನು ಕಲ್ಲು ಮತ್ತು ದೊಣ್ಣೆಯಿಂದ ಬುಡಕಟ್ಟು ಜನಾಂಗದವರು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 200 ಜನ ಬುಡಕಟ್ಟು ಜನಾಂಗದವರು ಸೇರಿಕೊಂಡು ಮೂವರನ್ನು ಹೊಡೆದು ಕೊಂದು ಹಾಕಿದ್ದಾರೆ. ಕಾಸಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ದಬದಿ-ಖಾನ್ವೆಲ್ ರಸ್ತೆಯಲ್ಲಿ ಗುರುವಾರ ರಾತ್ರಿ ತಮ್ಮ ಕಾರಿನಲ್ಲಿ ನಾಸಿಕ್‍ಗೆ ಹೋಗುತ್ತಿದ್ದ ಮೂವರನ್ನು ಕಳ್ಳರು ಎಂದು ಅಡ್ಡಗಟ್ಟಿ ಹೊಡೆದು ಕೊಲೆ ಮಾಡಲಾಗಿದೆ.
Advertisement
Advertisement
ಈ ಬುಡಕಟ್ಟು ಜನಾಂಗದವರು ಇರುವ ಹಳ್ಳಿಗಳಲ್ಲಿ ರಾತ್ರಿಯ ಸಮಯದಲ್ಲಿ ಕಳ್ಳತನಗಳು ಆಗುತ್ತಿದ್ದವು. ಈ ಕಾರಣಕ್ಕೆ ಬುಡಕಟ್ಟಿನ ಕೆಲವರು ರಾತ್ರಿಯ ವೇಳೆ ಗಸ್ತು ತಿರುಗುತ್ತಿದ್ದರು. ಈ ವೇಳೆ ರಾತ್ರಿಯಲ್ಲಿ ಕಾರಿನಲ್ಲಿ ಚಲಿಸುತ್ತಿದ್ದ ಮೂವರನ್ನು ಕಂಡು ಅಡ್ಡಗಟ್ಟಿದ್ದಾರೆ. ಅಲ್ಲದೆ ಇವರೇ ಕಳ್ಳರು ಎಂದು ಅನುಮಾನಗೊಂಡು ಕಾರಿನ ಮೇಲೆ ಕಲ್ಲು ತೂರಾಟ ಮಾಡಲು ಆರಂಭಿಸಿದ್ದಾರೆ.
Advertisement
ಈ ನಂತರ ಕಾರಿನಲ್ಲಿದ್ದ ಮೂವರನ್ನು ಹೊರೆಗೆ ಎಳೆದುಕೊಂಡು ಸುಮಾರು 200 ಜನರು ಸೇರಿಕೊಂಡು ಕಲ್ಲು ಮತ್ತು ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ. ಈ ನಡುವೆ ಕಾರಿನ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಈ ಮೂವರನ್ನು ಅಲ್ಲಿನ ಜನರು ಮಾರಣಾಂತಿಕವಾಗಿ ಹಲ್ಲೆ ಮಾಡಿರುತ್ತಾರೆ. ಈ ವೇಳೆ ವಿಷಯ ತಿಳಿದ ಕಾಸಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.
Advertisement
ಸುಮಾರು 20 ಪೇದೆಗಳೊಂದಿಗೆ ಪೊಲೀಸರು ಸ್ಥಳಕ್ಕೆ ಬಂದಾಗ, ಪೊಲೀಸರ ವಿರುದ್ಧವೇ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ. ಈ ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದು, ಬುಡಕಟ್ಟು ಜನಾಂಗದವರು ಪೊಲೀಸ್ ವಾಹನವನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾರೆ. ಈ ನಡುವೆ ಗ್ರಾಮಸ್ಥರನ್ನು ನಿಗ್ರಹಿಸಲು ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ಅಲ್ಲಿಂದ ಆ ಮೂವರನ್ನು ಪೊಲೀಸರು ಕರೆದುಕೊಂಡು ಬಂದಿದ್ದಾರೆ.
ಹಲ್ಲೆಗೆ ಒಳಗಾದ ಮೂವರು ತೀವ್ರವಾಗಿ ಗಾಯಗೊಂಡಿದ್ದ ಕಾರಣ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ವಿಚಾರವಾಗಿ ಬುಡಗಟ್ಟು ಜನಾಂಗದ 20 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅವರನ್ನು ವಿಚಾರಣೆ ಮಾಡಿದಾಗ ಆ ಮೂವರು ಕಳ್ಳರು ಎಂದು ಅವರ ಮೇಲೆ ಹಲ್ಲೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡ ಕಾಸಾ ಪೊಲೀಸರು ತನಿಖೆ ಮಾಡುತ್ತಿದ್ದಾರೆ.