ಬೆಂಗಳೂರು: ಒಂದು ಕಡೆ ಪ್ರವಾಹದಿಂದ ಬದುಕೇ ಬೀದಿಗೆ ಬಿದ್ದಿದ್ರೆ ಇತ್ತ ಹೈದ್ರಾಬಾದ್ ಕರ್ನಾಟಕದಲ್ಲಿ ಒಂದೆರಡು ದಿನದ ಮಟ್ಟಿಗೆ ಮಳೆರಾಯ ಮತ್ತೆ ಅಬ್ಬರಿಸೋ ಸಾಧ್ಯತೆ ಇದೆ. ಇವತ್ತು ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆಗಳಿವೆ.
ಮಹಾರಾಷ್ಟ್ರ ಮಳೆ ವಿರಾಮದ ನಂತರ ಮತ್ತೆ ಬಂದಿದೆ. ಪುಣೆ, ರಾಯ್‍ಗಢ್, ಮುಂಬೈ ಮತ್ತು ಸತಾರದಲ್ಲಿ ಇವತ್ತಿನ ಮಟ್ಟಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೀಡ್, ಔರಂಗಬಾದ್, ಪಾಲ್ಗಾರ್, ಥಾಣೆ, ರತ್ನಗಿರಿ, ಸಿಂಧುದುರ್ಗ ಜಿಲ್ಲೆಯಲ್ಲೂ ಭಾರೀ ಮಳೆ ಆಗುವ ನಿರೀಕ್ಷೆ ಇದೆ. ಕೊಯ್ನಾ ಜಲಾಶಯದ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾದ್ರೆ ಮತ್ತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಪ್ರವಾಹ ಭೀತಿ ಎದುರಾಗಲಿದೆ.
Advertisement
Advertisement
ಬುಧವಾರ ರಾತ್ರಿ ಬೆಂಗಳೂರಿನ ಹಲವೆಡೆ ರಾತ್ರಿ ಮಳೆಯಬ್ಬರಿಸಿತ್ತು. ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆಗಳಿವೆ. ಇತ್ತ ಬುಧವಾರ ರಾಯಚೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಸಿಂಧನೂರು, ಮಾನ್ವಿ ಹಾಗೂ ರಾಯಚೂರು ಗ್ರಾಮೀಣ ಸೇರಿದಂತೆ ಬಹುತೇಕ ಎಲ್ಲಾ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಬುಧವಾರ ಸುರಿದ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು, ಉತ್ತಮ ಮಳೆಯಾಗುತ್ತಿದೆ.