ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ವಿಶ್ವಾಸ ಮತಯಾಚನೆಯನ್ನು ಗುರುವಾರ ನಡೆಸಬೇಕು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.
ಅಘಾಡಿ ಸರ್ಕಾರಕ್ಕೆ ಈಗ ಬಲಪರೀಕ್ಷೆ ಸಮಯ. ಗುರುವಾರ ಬೆಳಗ್ಗೆ 11 ಗಂಟೆಗೆ ಉದ್ಧವ್ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಆದೇಶ ನೀಡಿದ್ದರು. ವಿಶೇಷ ಅಧಿವೇಶನ ಕರೆದು ಸಂಜೆ ಐದು ಗಂಟೆಯೊಳಗೆ ವಿಶ್ವಾಸಮತ ಪ್ರಕ್ರಿಯೆ ಮುಗಿಸುವಂತೆ ವಿಧಾನಸಭೆ ಕಾರ್ಯದರ್ಶಿಗೆ ಖಡಕ್ಕಾಗಿ ಆರ್ಡರ್ ಮಾಡಿದ್ದರು. ಆದರೆ ಅನರ್ಹತೆ ಪ್ರಕರಣ ಇತ್ಯರ್ಥವಾಗದೇ ಬಲಪರೀಕ್ಷೆಗೆ ಹೇಗೆ ಅವಕಾಶ ನೀಡಲಾಗ್ತಿದೆ ಎಂದು ಪ್ರಶ್ನಿಸಿ ಶಿವಸೇನೆ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.
ಇಂದು ಈ ಅರ್ಜಿ ವಿಚಾರಣೆಯ ವಿಚಾರಣೆ ಸತತ ಮೂರುವರೆ ಗಂಟೆಗಳಿಂದ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ. ಅನರ್ಹತೆ ಪ್ರಕರಣ ಇತ್ಯರ್ಥವಾಗುವವರೆಗೆ ಸದನದಲ್ಲಿ ವಿಶ್ವಾಸ ಪರೀಕ್ಷೆಗೆ ಅವಕಾಶ ನೀಡಬಾರದು ಎಂದು ಉದ್ಧವ್ ಪರ ವಕೀಲರು ಪ್ರಬಲ ವಾದ ಮಂಡಿಸಿದ್ದರು.
ಸರ್ಕಾರದ ಅರ್ಜಿ ಮಾನ್ಯ ಮಾಡಬೇಡಿ. ಶಿವಸೇನೆಯಲ್ಲಿ ಈಗ 16 ಶಾಸಕರಷ್ಟೇ ಉಳಿದುಕೊಂಡಿದ್ದಾರೆ. ನಾಳೆ ವಿಶ್ವಾಸ ಪರೀಕ್ಷೆಯನ್ನು ತಡೆಯಬೇಡಿ ಎಂದು ರೆಬೆಲ್ ಶಾಸಕರ ಪರ ವಕೀಲರು ಪ್ರತಿವಾದ ಮಂಡಿಸಿದ್ದರು.
ರಾಜ್ಯಪಾಲರ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್, ರಾಜ್ಯಪಾಲರ ಆದೇಶವನ್ನು ಯಾರು ಪ್ರಶ್ನಿಸುವಂತಿಲ್ಲ ಎಂದು ವಾದ ಮಾಡಿದ್ದಾರೆ. 8.30ಕ್ಕೆ ವಿಚಾರಣೆ ಮುಗಿಸಿದ್ದ ಸುಪ್ರೀಂಕೋರ್ಟ್ ರಾತ್ರಿ 9ಕ್ಕೆ ತನ್ನ ತೀರ್ಪು ಪ್ರಕಟಿಸಿ ಶಿವಸೇನೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
ಬಲಪರೀಕ್ಷೆಯಲ್ಲಿ ಭಾಗಿಯಾಗಲು ಅವಕಾಶ ನೀಡುವಂತೆ ಜೈಲಿನಲ್ಲಿರುವ ಎನ್‍ಸಿಪಿ ಮುಖಂಡರಾದ ಅನಿಲ್ ದೇಶಮುಖ್ ಮತ್ತು ನವಾಬ್ ಮಲಿಕ್ ಸಹ ಕೋರ್ಟ್ ಮೆಟ್ಟಿಲೇರಿದ್ದರು. ಇವರ ಅರ್ಜಿ ವಿಚಾರಣೆ ಕೋರ್ಟ್ ಇಡಿ ರಕ್ಷಣೆಯಲ್ಲಿ ಮತದಾನಕ್ಕೆ ಅನುಮತಿ ನೀಡಿದೆ.
ಈ ಬೆಳವಣಿಗೆಗಳ ನಡ್ವೆ ರೆಬೆಲ್ ಟೀಂ ಗುವಾಹಟಿಯಿಂದ ಗೋವಾಗೆ ಶಿಫ್ಟ್ ಆಗಿದೆ. ಗುರುವಾರ ಬೆಳಗ್ಗೆ 11 ಗಂಟೆಗೆ ನೇರವಾಗಿ ವಿಧಾನಸಭೆಗೆ ಬರಲು ಶಿಂಧೆ ಸೇನೆ ಪ್ಲಾನ್ ಮಾಡಿದೆ. ನಮಗೆ 50 ಶಾಸಕರ ಬೆಂಬಲ ಇದ್ದು, ಈ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲೋದು ನಾವೇ ಎಂದು ರೆಬೆಲ್ ನಾಯಕ ಏಕನಾಥ್ ಶಿಂಧೆ ಹೇಳಿದ್ದಾರೆ. ಇತ್ತ ಬಿಜೆಪಿಯೂ ಶಾಸಕಾಂಗ ಪಕ್ಷದ ಸಭೆ ನಡೆಸಿದೆ. ಮುಂಜಾಗ್ರತಾ ಕ್ರಮವಾಗಿ ಮುಂಬೈನಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
`ಮಹಾ’ ಲೆಕ್ಕ..
* ಸದನದ ಒಟ್ಟು ಸ್ಥಾನ – 288 (ಒಬ್ಬರು ಸಾವನ್ನಪ್ಪಿದ್ದಾರೆ)
* ಮ್ಯಾಜಿಕ್ ಫಿಗರ್ – 144
* ಅಘಡಿ ಕೂಟದ ಬಲ – 168
* ಬಂಡಾಯದ ನಂತರ – 118
* ಉದ್ಧವ್ ಬಣದ ಬಲ – 16
* ಶಿಂಧೆಸೇನೆ ಬಲ – 50
* ಬಿಜೆಪಿ ಕೂಟದ ಬಲ – 113
* ಶಿಂಧೆಸೇನೆ ಬಂಬಲಿಸಿದರೆ – 163