ಮುಂಬೈ: ಶಿಂಧೆಸೇನೆ ಬಂಡಾಯದಿಂದ ತತ್ತರಿಸಿರುವ ಮಹಾರಾಷ್ಟ್ರ ಅಘಾಡಿ ಸರ್ಕಾರ ಪತನದಂಚು ತಲುಪಿದೆ. ಉದ್ಧವ್ ಠಾಕ್ರೆ ಸರ್ಕಾರ ಉಳಿವಿಗೆ ಎಷ್ಟೇ ಪ್ರಯತ್ನಪಟ್ರು ಬಂಡಾಯದ ಬಿಸಿ ತಣ್ಣಗಾಗ್ತಿಲ್ಲ. ಶಿವಸೇನೆ ಕಾರ್ಯಕರ್ತರ ಆಕ್ರೋಶದ ಕಟ್ಟೆ ಒಡೆದಿದ್ದು, ಮುಂಬೈನಲ್ಲಿರುವ ಬಂಡಾಯ ಶಾಸಕರ ಕಚೇರಿಗೆ ನುಗ್ಗಿ ಧ್ವಂಸ ಮಾಡ್ತಿದ್ದಾರೆ. ಹೀಗಾಗಿ ಬಂಡಾಯ ಶಾಸಕರ ಮನೆ ಕಚೇರಿಗಳಿಗೆ ಭದ್ರತೆ ನೀಡಲಾಗಿದ್ದು, ಜುಲೈ 19ರವರೆಗೆ ಮುಂಬೈನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಇತ್ತ ಬಂಡಾಯ ಶಾಸಕರೆಲ್ಲರಿಗೂ ಕಾದಿದೆ ಅಂತ ಶಿವಸೇನೆ ನಾಯಕ ಸಂಜಯ್ ರಾವತ್ ಎಚ್ಚರಿಕೆ ನೀಡಿದ್ದಾರೆ. ಪಕ್ಷಕ್ಕೆ ದ್ರೋಹ ಬಗೆದವರನ್ನು ಬಿಡೋ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ. 16 ಬಂಡಾಯ ಶಾಸಕರ ವಿರುದ್ಧ ಶಿವಸೇನೆ ಅನರ್ಹತೆ ಅಸ್ತ್ರ ಪ್ರಯೋಗಿಸಿದೆ. ಉದ್ಧವ್ ಸೇನೆಯ ಅನರ್ಹತೆ ಅಸ್ತ್ರಕ್ಕೆ ಪ್ರತಿಯಾಗಿ ಡೆಪ್ಯುಟಿ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಶಿಂಧೆ ಬಣದ ಶಾಸಕರು ಮುಂದಾಗಿದ್ದಾರೆ. ಆದರೆ ಇದನ್ನ ಡೆಪ್ಯುಟಿ ಸ್ಪೀಕರ್ ತಳ್ಳಿಹಾಕಿದ್ದಾರೆ. 16 ರೆಬೆಲ್‍ಗಳಿಗೆ ಡೆಪ್ಯುಟಿ ಸ್ಪೀಕರ್ ಶೋಕಾಸ್ ನೊಟೀಸ್ ಜಾರಿ ಮಾಡಿದ್ದು, ಉತ್ತರಿಸಲು ಸೋಮವಾರ ಸಂಜೆ 5 ಗಂಟೆಯವರೆಗೂ ಸಮಯ ನೀಡಿದ್ದಾರೆ. ಇತ್ತ ಅತೃಪ್ತ ಶಾಸಕರ ನಾಯಕ ಏಕನಾಥ ಶಿಂಧೆ, ದೇವೇಂದ್ರ ಫಡ್ನವಿಸ್ ಮತ್ತು ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ; ಬಂಡಾಯ ಶಾಸಕರು ಅವರಪ್ಪನ ಹೆಸರು ಬಳಸಿ ಚುನಾವಣೆ ಎದುರಿಸಲಿ – ಉದ್ಧವ್ ಠಾಕ್ರೆ ಕಿಡಿ
ಶುಕ್ರವಾರ ರಾತ್ರಿ ವಿಶೇಷ ವಿಮಾನದ ಮೂಲಕ ಅಸ್ಸಾಂನಿಂದ ಗುಜರಾತ್‍ನ ವಡೋದರಕ್ಕೆ ತೆರಳಿ ಅಲ್ಲಿ ರಹಸ್ಯ ಸಭೆ ನಡೆಸಿದ್ದು ಮುಂದಿನ ರಾಜಕೀಯ ಲೆಕ್ಕಾಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಂಡಾಯ ಶಾಸಕರಿಗೆ ಪಕ್ಷದ ಹೆಸರು ಮತ್ತು ಅದರ ನಾಯಕರ ಹೆಸರು ಬಳಸಿಕೊಳ್ಳುವ ಅವಕಾಶ ಇಲ್ಲ, ಮತ್ತು ಪಕ್ಷದ್ರೋಹ ಮಾಡಿದ ಏಕನಾಥ ಶಿಂಧೆ ವಿರುದ್ಧ ಕ್ರಮಕ್ಕೆ ನಿರ್ಧರಿಸಲಾಗಿದೆ.



