ಮುಂಬೈ: ಮಹಾ ವಿಕಾಸ ಅಘಾಡಿ ಸರ್ಕಾರಿ ಪತನಗೊಳ್ಳುವುದು ಅಧಿಕೃತವಾಗುತ್ತಿದ್ದಂತೆ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಇಂದು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಅನುಮತಿ ಕೇಳುವ ಸಾಧ್ಯತೆಯಿದೆ.
ಇಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ತಮ್ಮ ಸರ್ಕಾರಕ್ಕೆ ಬೆಂಬಲ ನೀಡುವ ಶಾಸಕರ ಪಟ್ಟಿಯನ್ನು ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಬಿಜೆಪಿ ನಾಯಕ, ಕೇಂದ್ರ ಸಚಿವ ರಾವ್‌ಸಹೇಬ್ ಪಾಟೀಲ್ ಶಿವಸೇನೆ ಆಂತರಿಕ ಬಿಕ್ಕಟ್ಟಿನಿಂದ ಆಜಕೀಯ ಅಸ್ಥಿರತೆ ಸೃಷ್ಟಿಯಾಗಿದೆ. ಬಿಜೆಪಿ ಸರ್ಕಾರ ರಚನೆಗೆ ಮುಂದಾಗುವುದಿಲ್ಲ. ಅಷ್ಟೇ ಅಲ್ಲದೇ ಪಕ್ಷ ಶಿವಸೇನೆ ಶಾಸಕರ ಜೊತೆ ಸಂಪರ್ಕದಲ್ಲಿ ಇಲ್ಲ ಎಂದು ತಿಳಿಸಿದ್ದರು.
ಶಿವಸೇನೆ ಶಾಸಕರು ಒಬ್ಬೊಬ್ಬರಾಗಿ ಏಕನಾಥ್ ಶಿಂಧೆ ಟೀಂನ್ನು ಸೇರಿಕೊಳ್ಳುತ್ತಿದ್ದು ಈಗ ಶಾಸಕ ಮಂಗೇಶ್ ಶಿಂಧೆ ತೆರಳಿದ್ದಾರೆ. ಇದನ್ನೂ ಓದಿ: ಶಿವಸೇನೆಯ ಉಳಿವಿಗಾಗಿ ಮೈತ್ರಿಯಿಂದ ಹೊರಬರುವುದು ಅನಿವಾರ್ಯ: ಏಕನಾಥ್ ಶಿಂಧೆ
ಇತ್ತ ಸಿಎಂ ಉದ್ಧವ್ ಠಾಕ್ರೆ ಸಿಎಂ ಅಧಿಕೃತ ನಿವಾಸ ವರ್ಷಾವನ್ನು ತೊರೆದಿದ್ದಾರೆ. ಲಗೇಜ್ ಸಮೇತ ಕುಟುಂಬದ ಮನೆ ಮಾತೋಶ್ರೀಗೆ ಶಿಫ್ಟ್ ಆಗಿದ್ದು, ಉದ್ಧವ್ ಠಾಕ್ರೆ ನಡೆ ತೀವ್ರ ಕುತೂಹಲ ಕೆರಳಿಸಿದೆ. ಇದೇ ವೇಳೆ ಬೆಂಬಲಿಗರು ಅಡ್ಡಗಟ್ಟಿ ರಾಜೀನಾಮೆ ನೀಡದಂತೆ ಕೂಗಿದ್ದಾರೆ.
ಅಘಾಡಿ ಸರ್ಕಾರ ಉಳಿಸಲು ಶರದ್ ಪವಾರ್ ಅಖಾಡಕ್ಕಿಳಿದಿದ್ದಾರೆ. ಬಂಡಾಯ ನಾಯಕ ಏಕನಾಥ್ ಶಿಂಧೆ ಅವರನ್ನೇ ಮುಖ್ಯಮಂತ್ರಿ ಮಾಡಿ ಅಂತ ಉದ್ಧವ್ ಠಾಕ್ರೆಗೆ ಸಲಹೆ ನೀಡಿದ್ದಾರೆ. ಆದರೆ ಏಕನಾಥ್ ಶಿಂಧೆ ಯಾವುದಕ್ಕೂ ಒಪ್ಪುತ್ತಿಲ್ಲ. ಮೈತ್ರಿಕೂಟವೇ ಬೇಡ ಎನ್ನುತ್ತಿದ್ದಾರೆ.
ಮಹಾಮೈತ್ರಿಯಲ್ಲಿನ ಭಿನ್ನಾಭಿಪ್ರಾಯ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ, ಅತೃಪ್ತ ಶಾಸಕರನ್ನು ಸಂರ್ಪಕಿಸಿದೆ. 2/3 ಭಾಗದಷ್ಟು ಶಾಸಕರು ಮತ್ತು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರ ಮಾಡಲು ಪ್ರಯತ್ನ ಮಾಡುತ್ತಿದೆ. ಹೀಗಾಗಿ ಇವತ್ತು ಮಹಾರಾಷ್ಟ್ರದಲ್ಲಿ ನಡೆಯುವ ಬೆಳವಣಿಗೆ ನಿರ್ಣಾಯಕವಾಗಿದ್ದು ಮುಂದಿನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.