ವಿಜಯಪುರ: ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಹತ್ಯೆ ಪ್ರಕರಣ ಸಂಬಂಧ ಲಂಚ ಪಡೆದ ಕರ್ನಾಟಕ ಪೊಲೀಸ್ ಅಧಿಕಾರಿಯನ್ನು ಮಹಾರಾಷ್ಟ್ರ ಎಸಿಬಿ ಅಧಿಕಾರಿಗಳು ಹುಡುಕಿಕೊಂಡು ರಾಜ್ಯಕ್ಕೆ ಬಂದಿದ್ದಾರೆ.
ಆರೋಪಿಗಳ ವಿಚಾರಣೆಗೆ ತೆರಳಿದ್ದ ವೇಳೆ ಲಂಚ ಸ್ವೀಕರಿಸುತ್ತಿದ್ದಾಗ ಬಸವನಬಾಗೇವಾಡಿ ಉಪವಿಭಾಗದ ಡಿವೈಎಸ್‍ಪಿ ಮಹೇಶ್ವರಗೌಡ ಹಾಗೂ ರೈಟರ್ ಮಲ್ಲಿಕಾರ್ಜುನ ಪೂಜಾರಿ ಮಹಾರಾಷ್ಟ್ರ ಎಸಿಬಿ ಬಲೆಗೆ ಬಿದ್ದಿದ್ದರು. ರೇಷ್ಮಾ ಪಡೇಕನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತೌಫಿಕ್ ಪೈಲ್ವಾನ್ ಕುಟುಂಬಸ್ಥರಿಗೆ ಬಸವನಬಾಗೇವಾಡಿ ಉಪವಿಭಾಗದ ಡಿವೈಎಸ್‍ಪಿ ಮಹೇಶ್ವರಗೌಡ ಹಾಗೂ ರೈಟರ್ ಪೂಜಾರಿ ಒಟ್ಟು 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಮಧ್ಯವರ್ತಿ ರಿಯಾಜ್ 1.5 ಲಕ್ಷ ರೂ.ಗೆ ಈ ವ್ಯವಹಾರ ಕುದುರಿಸಿದ್ದ.
Advertisement
Advertisement
ಈ ಒಪ್ಪಂದಕ್ಕೆ ಪೈಲ್ವಾನ್ ಕುಟುಂಬಸ್ಥರು 1 ಲಕ್ಷ ನೀಡಲು ಒಪ್ಪಿಗೆ ಸೂಚಿಸಿದ್ದರು. ಲಂಚದ ಹಣ ಪಡೆಯಲು ಬಂದಾಗ ಆಗಸ್ಟ್ 22ರಂದು ಸೋಲಾಪುರ ಎಸಿಬಿ ಅಧಿಕಾರಿಗಳು ಪೂಜಾರಿ ಹಾಗೂ ರಿಯಾಜ್ ಇಬ್ಬರನ್ನು ಸೆರೆ ಹಿಡಿದಿದ್ದರು. ಅಲ್ಲದೆ ಡಿವೈಎಸ್‍ಪಿ ಮಹೇಶ್ವರಗೌಡರನ್ನು ಬಂಧಿಸಲು ಒಂದು ತಂಡವನ್ನು ವಿಜಯಪುರಕ್ಕೆ ಕಳುಹಿಸಿರುವುದಾಗಿ ಎಸಿಬಿ ಅಧಿಕಾರಿ ಅಜಿತ್ ಜಾಧವ್ ತಿಳಿಸಿದ್ದರು.
Advertisement
ಇಬ್ಬರ ಬಂದನ ನಡೆದ ಬಳಿಕ ಡಿವೈಎಸ್‍ಪಿ ಮಹೇಶ್ವರಗೌಡ ನಾಪತ್ತೆಯಾಗಿದ್ದಾರೆ. ಅವರನ್ನು ಬಂಧಿಸಲು ಮಹಾರಾಷ್ಟ್ರದ ಎಸಿಬಿಯ ನಾಲ್ವರು ಅಧಿಕಾರಿಗಳು ಕರ್ನಾಟಕಕ್ಕೆ ಬಂದಿದ್ದು, ವಿಜಯಪುರ ಎಸ್‍ಪಿ ಕಚೇರಿಗೆ ಭೇಟಿ ನೀಡಿದ ಎಸಿಬಿ ಅಧಿಕಾರಿಗಳು ಕೊಲೆ ಪ್ರಕರಣ ಹಾಗೂ ಮಹೇಶ್ವರಗೌಡ ಅವರ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಶೀಘ್ರದಲ್ಲೇ ಮಹೇಶ್ವರಗೌಡ ಅವರನ್ನು ವಶಕ್ಕೆ ಪಡೆಯುವುದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.