ನವದೆಹಲಿ: ಮಹಾರಾಷ್ಟ್ರದ (Maharashtra) ರಾಜಕೀಯ ಕ್ಷಿಪ್ರ ಬೆಳವಣಿಗೆಯಲ್ಲಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರಕ್ಕೆ ಬೆಂಬಲ ನೀಡಿ ಉಪ ಮುಖ್ಯಮಂತ್ರಿಯಾದ ಬಳಿಕ ದೇಶದಲ್ಲಿ ಹೊಸ ರಾಜಕೀಯ ಚರ್ಚೆ ಶುರುವಾಗಿದೆ. ಹಲವು ರಾಜ್ಯಗಳಲ್ಲಿ ಇದೇ ರೀತಿಯ ಬೆಳವಣಿಗೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಮಹಾರಾಷ್ಟ್ರದ ಬೆನ್ನಲ್ಲೇ ಬಿಹಾರದಲ್ಲೂ (Bihar) ಇದೇ ರೀತಿಯ ಬೆಳವಣಿಗೆಯಾಗಬಹುದು ಎನ್ನಲಾಗುತ್ತಿದೆ. ಬಿಜೆಪಿ (BJP) ಸಾಂಗತ್ಯ ಬಿಟ್ಟು ಆರ್‌ಜೆಡಿ (RJD) ಜೊತೆಗೂಡಿ ಸರ್ಕಾರ ರಚಿಸಿರುವ ಜೆಡಿಯು (JDU)ಮುಖ್ಯಸ್ಥ, ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಮತ್ತೆ ಕಮಲದ ಕೈ ಹಿಡಿಯಬಹುದು ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಹಲವು ಬೆಳವಣಿಗೆ ನಡೆದಿವೆ.
Advertisement
Advertisement
ಅಮಿತ್ ಶಾ ಮೃದು ಧೋರಣೆ:
ನಿತೀಶ್ ಕುಮಾರ್ ಬಿಜೆಪಿಯಿಂದ ದೂರವಾದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ 10 ತಿಂಗಳಲ್ಲಿ 5 ಬಾರಿ ಬಿಹಾರಕ್ಕೆ ಭೇಟಿ ನೀಡಿದ್ದಾರೆ. ಪ್ರತಿ ಸಂದರ್ಭದಲ್ಲೂ ಅವರು ನಿತೀಶ್ ಕುಮಾರ್ ಅವರನ್ನು ತಮ್ಮ ಭಾಷಣಗಳಲ್ಲಿ ಕಟುವಾಗಿ ಟೀಕಿಸಿದರು. ಅವರಿಗೆ ಬಿಜೆಪಿಯ ಬಾಗಿಲು ಶಾಶ್ವತವಾಗಿ ಮುಚ್ಚಲ್ಪಟ್ಟಿದೆ ಎಂದು ಘೋಷಿಸಿದರು.
Advertisement
ಆದರೆ, ಜೂನ್ 29 ರಂದು ಬಿಹಾರದ ಲಖಿಸರಾಯ್‌ಗೆ ಭೇಟಿ ನೀಡಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ನಿತೀಶ್ ಕುಮಾರ್ ಅವರ ಬಗ್ಗೆ ಒಂದೇ ಒಂದು ಟೀಕೆ ಮಾಡಲಿಲ್ಲ ಅಥವಾ ಬಿಜೆಪಿಯ ಬಾಗಿಲು ಅವರಿಗೆ ಮುಚ್ಚಿದೆ ಎಂಬ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿಲಿಲ್ಲ. ಬದಲಿಗೆ ಭ್ರಷ್ಟಾಚಾರವನ್ನು ಎತ್ತಿ ತೋರಿಸುವುದರ ಮೂಲಕ ನಿತೀಶ್ ಕುಮಾರ್ ಅವರ ಆತ್ಮಸಾಕ್ಷಿಯನ್ನು ಪ್ರಚೋದಿಸಲು ಅಮಿತ್ ಶಾ ಪ್ರಯತ್ನಿಸಿದರು. 20 ಲಕ್ಷ ಕೋಟಿ ರೂ. ಹೆಚ್ಚು ಮೊತ್ತದ ಹಗರಣಗಳ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳೊಂದಿಗೆ ನಿತೀಶ್ ಮೈತ್ರಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.
Advertisement
ಅಮಿತ್ ಶಾ ಅವರ ಮೃದು ಧೋರಣೆ ಮೂಲಕ ನಿತೀಶ್ ಕುಮಾರ್‌ಗೆ ಮತ್ತೊಮ್ಮೆ ಮಣೆ ಹಾಕಲು ಬಿಜೆಪಿ ಭ್ರಷ್ಟಾಚಾರವನ್ನು ಕೇಂದ್ರಬಿಂದುವಾಗಿ ಬಳಸಿಕೊಳ್ಳಬಹುದು ಎಂಬ ಊಹಾಪೋಹಗಳು ಬಿಹಾರದ ರಾಜಕೀಯ ವಲಯಗಳಲ್ಲಿ ಹೊರಹೊಮ್ಮಲು ಪ್ರಾರಂಭವಾಗಿದೆ.
ಏಕಾಏಕಿ ಶಾಸಕರ ಸಭೆ:
ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಪಕ್ಷದ ಶಾಸಕರ ಜೊತೆಗೆ ಏಕಾಏಕಿ ಸಭೆ ನಡೆಸಿದ್ದಾರೆ. ಅಮಿತ್ ಶಾ ಅವರು ಲಖಿಸರಾಯ್‌ಗೆ ಭೇಟಿ ನೀಡುವ 2 ದಿನಗಳ ಮೊದಲು ತಮ್ಮ ಎಲ್ಲಾ ಶಾಸಕರೊಂದಿಗೆ ಒಂದರ ಮೇಲೊಂದು ಸಭೆಗಳನ್ನು ನಡೆಸಲು ಪ್ರಾರಂಭಿಸಿದರು. ಈ ಸಭೆಗಳಲ್ಲಿ ನಿತೀಶ್ ಕುಮಾರ್ ಅವರು ತಮ್ಮ ಶಾಸಕರಿಂದ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಆಲಿಸಿದರು.
ಮೂಲಗಳ ಪ್ರಕಾರ ನಿತೀಶ್ ಕುಮಾರ್ ಅವರು ತಮ್ಮ ಶಾಸಕರನ್ನು ಒಗ್ಗಟ್ಟಾಗಿಡುವುದು ಮತ್ತು ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಸಂದೇಶ ರವಾನಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇಷ್ಟು ಮಾತ್ರವಲ್ಲದೇ ಪಕ್ಷದೊಳಗೆ ವಿಭಜನೆಯ ಭೀತಿ ನಿತೀಶ್ ಕುಮಾರ್ ಶಾಸಕರೊಂದಿಗಿನ ವೈಯಕ್ತಿಕ ಸಭೆಗಳನ್ನು ನಡೆಸಲು ಕಾರಣವಾಗಿದ್ದು, ಅವರು ಶಾಸಕರ ಮನಸ್ಥಿತಿ ಅರಿಯುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: ಹೊಲ ಉತ್ತಿ, ಬೀಜ ಬಿತ್ತಿ, ಬೆವರು ಹೊಳೆ ಹರಿಸಿ ಡಿಕೆಶಿ ಲೂಲೂ ಮಾಲ್ ಕಟ್ಟಿದ್ರಾ? – ಕಾಂಗ್ರೆಸ್‌ಗೆ ಜೆಡಿಎಸ್ ಕೌಂಟರ್
ಪಾಟ್ನಾ ಸಭೆಯ ನಂತರ ಆರ್‌ಜೆಡಿ ನಾಯಕರ ಅತೃಪ್ತಿ:
ಜೂನ್ 23 ರಂದು ಪಾಟ್ನಾದಲ್ಲಿ ವಿರೋಧ ಪಕ್ಷಗಳ ಸಭೆ ನಡೆದ ಬಳಿಕ ಆರ್‌ಜೆಡಿಯಲ್ಲಿ ಬಂಡಾಯ ಶುರುವಾಗಿದೆ. ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿಯಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಸಿಎಂ ತೇಜಸ್ವಿಯಾದವ್‌ಗೆ ಅವಕಾಶ ನೀಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಸ್ಥಾನವನ್ನು ಬಿಟ್ಟು ಕೊಡಲು ನಿತೀಶ್ ಕುಮಾರ್ ಸಿದ್ಧವಿಲ್ಲ. ಈ ಹಿನ್ನೆಲೆ ಜೆಡಿಯು, ಆರ್‌ಜೆಡಿ ನಡುವೆ ಸಣ್ಣ ಮಟ್ಟದ ತಿಕ್ಕಾಟ ಶುರುವಾಗಿದೆ.
ಮಹಾರಾಷ್ಟ್ರದಲ್ಲಿ ನಡೆದ ಭಾರೀ ರಾಜಕೀಯ ನಾಟಕದ ಬಳಿಕ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದ ಸುಶೀಲ್ ಮೋದಿ ಟ್ವೀಟ್‌ನಲ್ಲಿ ಇದೇ ರೀತಿಯ ಪರಿಸ್ಥಿತಿ ಬಿಹಾರದಲ್ಲೂ ಸಂಭವಿಸಬಹುದು ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಜೆಡಿಯುನಲ್ಲಿಯೂ ಒಡಕು ಉಂಟಾಗಬಹುದು ಎಂದು ಸುಶೀಲ್ ಮೋದಿ ಹೇಳಿಕೊಂಡಿದ್ದು, ಇಂತಹ ವಿಭಜನೆಯ ಭೀತಿಯಿಂದ ನಿತೀಶ್ ಕುಮಾರ್ ತಮ್ಮ ಶಾಸಕರೊಂದಿಗೆ ಪ್ರತ್ಯೇಕ ಚರ್ಚೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ. ಈ ನಡುವೆ ನಿತೀಶ್ ಕುಮಾರ್ ವಿಪಕ್ಷಗಳ ನೇತೃತ್ವ ವಹಿಸಿಕೊಂಡಿರುವ ಹಿನ್ನೆಲೆ ಅವರ ಮುಂದಿನ ನಡೆ ಏನಿರಬಹುದು ಎಂದು ತೀವ್ರ ಕುತೂಹಲದಿಂದ ಎದುರು ನೋಡಲಾಗುತ್ತಿದೆ. ಇದನ್ನೂ ಓದಿ: ವರ್ಗಾವಣೆ ಆರೋಪದ ಬೆನ್ನಲ್ಲೇ ಆಪ್ತರಿಗೆ ಸಿಎಂ ಸೂಚನೆ
Web Stories