CrimeLatestMain PostNational

ಯೂಟ್ಯೂಬ್ ನೋಡಿ ಕಳ್ಳತನ ಮಾಡಿದ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದ

ಮುಂಬೈ: ಯೂಟ್ಯೂಬ್ ನೋಡಿ ಕಳ್ಳತನ ಮಾಡುವುದನ್ನು ಕಲಿತ ಕಳ್ಳನೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಪಾಲ್ಘರ್‌ನ ಮನೆಗೆ ನುಗ್ಗಿ 9.75 ಲಕ್ಷ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ಕದ್ದ ಆರೋಪದ ಮೇಲೆ ಉತ್ತರ ಪ್ರದೇಶದ 38 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.

ಪೊಲೀಸರು ಆರೋಪಿ ಬಗ್ಗೆ ತನಿಖೆ ಮಾಡುವಾಗ ಈತನ ವಿರುದ್ಧ ಈ ಹಿಂದೆ ಯಾವುದೇ ಕ್ರಿಮಿನಲ್ ದಾಖಲೆ ಇಲ್ಲ ಎಂಬುದು ತಿಳಿದುಬಂದಿದೆ. ನಂತರ ಆರೋಪಿಯನ್ನು ವಿಚಾರಣೆ ಮಾಡಿದಾಗ ಪೊಲೀಸರೇ ಶಾಕ್ ಆಗಿದ್ಧಾರೆ. ಏಕೆಂದರೆ ಆತ, ನಾನು ಯೂಟ್ಯೂಬ್‍ನಲ್ಲಿ ಮನೆ ಕಳ್ಳತನ ಮಾಡುವ ವೀಡಿಯೋ ನೋಡಿದೆ. ನಂತರ ಈ ಕಳ್ಳತನ ಮಾಡಿದೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಪ್ರಾಣಿ ಪರೀಕ್ಷೆಗೆಂದು ಕರೆಸಿ ಪಶುವೈದ್ಯನನ್ನೆ ಅಪಹರಿಸಿ ಬಲವಂತದ ಮದುವೆ ಮಾಡಿದ್ರು 

ನಡೆದಿದ್ದೇನು?
ಆರೋಪಿ ದಿಲ್ಶಾದ್ ಫೈಯಾಜ್ ಶೇಖ್ ಜೂನ್ 5 ರಂದು ಅಚೋಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿ ಒಟ್ಟು 9.75 ಲಕ್ಷ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ. ಈ ಹಿನ್ನೆಲೆ ಮನೆಯವರು ಪೊಲೀಸರಿಗೆ ದೂರು ಕೊಟ್ಟಿದ್ದರು.

ಸಿಸಿಟಿವಿ ದೃಶ್ಯಾವಳಿಗಳು ಮತ್ತು ಗುಪ್ತಚರ ಇಲಾಖೆ ಸೇರಿದಂತೆ ವಿವಿಧ ಸುಳಿವುಗಳ ಆಧಾರದ ಮೇಲೆ ಪೊಲೀಸ್ ತಂಡಗಳನ್ನು ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ ಕಳುಹಿಸಲಾಗಿದೆ. ಈ ಹಿನ್ನೆಲೆ ಆರೋಪಿಯನ್ನು ಜೂನ್ 11 ರಂದು ಉತ್ತರ ಪ್ರದೇಶದಲ್ಲಿ ಹಿಡಿಯಲಾಗಿದ್ದು, ಕದ್ದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಇದನ್ನೂ ಓದಿ: ಮೈಸೂರು ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ: ಪ್ರತಾಪ್ ಸಿಂಹ ಆಹ್ವಾನ 

Leave a Reply

Your email address will not be published.

Back to top button