ಉತ್ತರ ಕರ್ನಾಟಕದ ಹಲವೆಡೆ ಪ್ರವಾಹ ಭೀತಿ – ಮಹಾರಾಷ್ಟ್ರ, ಗುಜರಾತ್‍ನಲ್ಲಿ ವರುಣನ ಅಬ್ಬರ

Public TV
1 Min Read
CKD RAIN

– ಅಮರನಾಥ ಯಾತ್ರೆ ರದ್ದು

ಬೆಳಗಾವಿ/ ಮುಂಬೈ: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ ಉತ್ತರ ಕರ್ನಾಟಕದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷ್ಣಾ ನದಿಯಲ್ಲಿ ಹೆಚ್ಚಿದ ಒಳ ಹರಿವು ಹೆಚ್ಚಿರುವುದರಿಂದ ಚಿಕ್ಕೋಡಿಯಲ್ಲಿ ಮೂರು ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿವೆ. ನಾರಾಯಣಪುರ ಡ್ಯಾಂ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇನ್ನೂ ಹೆಚ್ಚಿನ ನೀರು ಬಿಡುವ ಸಾಧ್ಯತೆಯಿದ್ದು, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ನದಿಪಾತ್ರದ ಗ್ರಾಮಗಳ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಎಚ್ಚರಿಕೆಯಿಂದ ಇರುವಂತೆ ತಾಲೂಕು ಆಡಳಿತ ಹೇಳಿದೆ. ಆಲಮಟ್ಟಿ ಡ್ಯಾಂ ಕೂಡ ಭರ್ತಿಯಾಗಿದ್ದು 6 ಕ್ರಸ್ಟ್‍ಗೇಟ್ ಗಳ ಮೂಲಕ 32,000 ಕ್ಯೂಸೆಕ್ ನೀರು ಹೊರಬಿಡಲಾಗ್ತಿದೆ.

01 Alamatti

ಮಹಾರಾಷ್ಟ್ರದಲ್ಲಿ ಮಹಾಮಳೆ ಹಿನ್ನೆಲೆ ನೀರಿನ ಒಳಹರಿವು ಪ್ರಮಾಣ ಹೆಚ್ಚಾಗಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಭರ್ತಿಯಾಗಿದೆ. 6 ಕ್ರಸ್ಟಗೇಟ್ ಗಳನ್ನು ಒಂದು ಮೀಟರ್ ಏರಿಸಿ 32,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಜೊತೆಗೆ ವಿದ್ಯುತ್ ಉತ್ಪಾದನೆ ಘಟಕಗಳ ಮೂಲಕ 40,000 ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿದೆ.

ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು ಮತ್ತೆ ವಾಣಿಜ್ಯ ನಗರಿಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುರ್ಬಾದ್ ಮತ್ತು ಕಲ್ಯಾಣ್ ನಗರ ಸಂಪರ್ಕಿಸುವ ರಾಯ್ತಾ ಎಂಬಲ್ಲಿ ಉಲಾಸ್ ನದಿಗೆ ಕಟ್ಟಿದ ಸೇತುವೆಯೇ ಕುಸಿದು ಬಿದ್ದಿದೆ. ಬೈಕುಲ್ಲಾದಲ್ಲಿ ಕಟ್ಟಡ ಕುಸಿದು ಒಬ್ಬರಿಗೆ ಗಾಯಗಳಾಗಿದೆ. ರೈಲು ಹಳಿಗಳಲ್ಲಿ ನೀರು ನಿಂತ ಪರಿಣಾಮ 5 ರೈಲುಗಳ ಸಂಚಾರ ನಿಷೇಧಿಸಲಾಗಿದೆ. 6ಕ್ಕೂ ಹೆಚ್ಚು ರೈಲುಗಳ ಮಾರ್ಗ ಬದಲಾಯಿಸಲಾಗಿದೆ. ಹವಾಮಾನ ಇಲಾಖೆ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದೆ.

rain 8

ಮುಂಬೈ, ಥಾಣೆ, ರಾಯ್‍ಗಡ್, ಪಲ್ಘಾಟ್‍ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ 1,311 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಎನ್‍ಡಿಆರ್ ಎಫ್ ತಂಡ ಪ್ರವಾಹಪೀಡಿತ ಸ್ಥಳಗಳಲ್ಲಿ ಬೀಡುಬಿಟ್ಟಿದೆ. ಗೋವಾ, ಗುಜರಾತ್, ರಾಜಸ್ಥಾನದಲ್ಲೂ ಭಾರೀ ಮಳೆ ಆಗುತ್ತಿದೆ. ಜಮ್ಮುವಿನಲ್ಲಿ ಮಳೆ ಮತ್ತು ಹಿಮಪಾತದ ಕಾರಣ ಅಮರನಾಥ ಯಾತ್ರೆಯನ್ನು ರದ್ದು ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *