ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಯುತಿ (Mahayuti) ಒಕ್ಕೂಟ ಪ್ರಚಂಡ ಜಯಗಳಿಸಿ ಎರಡು ದಿನ ಕಳೆದಿದೆ. ಆದರೆ ಹೊಸ ಸರ್ಕಾರದ ರಚನೆ ಯಾವಾಗ ಎಂಬುದನ್ನು ಸ್ಪಷ್ಟವಾಗಿ ಹೇಳಲು ಯಾರು ತಯಾರಿಲ್ಲ. ಇದಕ್ಕೆ ಕಾರಣ ಮುಂದಿನ ಮುಖ್ಯಮಂತ್ರಿ (Chief Minister) ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಈ ವಿಚಾರದಲ್ಲಿ ಒಮ್ಮತಾಭಿಪ್ರಾಯಕ್ಕೆ ಬರಲು ಬಿಜೆಪಿ-ಶಿಂಧೆ ಸೇನೆ-ಅಜಿತ್ ಪವಾರ್ ಎನ್‌ಸಿಪಿ ಇನ್ನಿಲ್ಲದ ಕಸರತ್ತು ನಡೆಸಿವೆ. ಮಹಾಯುತಿ ಭರ್ಜರಿ ಗೆಲುವಿನಲ್ಲಿ ಫಡ್ನಾವೀಸ್ (Devendra Fadnavis) ಪಾತ್ರ ಪ್ರಧಾನವಾದುದು ಎನ್ನುತ್ತಿರುವ ಬಿಜೆಪಿ (BJP) ಅವರನ್ನೇ ಸಿಎಂ ಮಾಡ್ಬೇಕು ಎಂದು ಪಟ್ಟು ಹಿಡಿದು ಕುಳಿತಿದೆ. ಆರ್‌ಎಸ್‌ಎಸ್ ಸಹ ಫಡ್ನಾವೀಸ್ ಅವರ ಪರವಾಗಿ ಬ್ಯಾಟ್ ಬೀಸಿದೆ. ಆದರೆ ಹಾಲಿ ಸಿಎಂ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಶಿವಸೇನೆ (Shiv Sena) ಮಾತ್ರ ಇದಕ್ಕೆ ಒಪ್ಪುತ್ತಿಲ್ಲ. ಇದನ್ನೂ ಓದಿ: ಇವಿಎಂ ಮ್ಯಾನಿಪ್ಯುಲೆಟ್ ಆಗಿದೆ ಅನ್ನೋದಕ್ಕೆ ಸಾಕ್ಷಿಗಳಿಲ್ಲ – ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ
ಲಾಡ್ಲಿ ಬೆಹನ್ ಯೋಜನೆ (Ladli Behna Yojana) ತಂದಿದ್ದು ಶಿಂಧೆ, ಸರ್ಕಾರದ ಯೋಜನೆಗಳು ಈ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿವೆ. ಹೀಗಾಗಿ ಮೈತ್ರಿ ಧರ್ಮದ ಅನುಸಾರ ಶಿಂಧೆ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು ಎನ್ನುತ್ತಿದೆ.
ಇನ್ನೊಂದು ಕಡೆ ಸಿಎಂ ರೇಸ್‌ನಲ್ಲಿ ಕಾಣಿಸಿಕೊಳ್ಳದ ಅಜಿತ್ ಪವಾರ್ (Ajit Pawar) ನೇತೃತ್ವದ ಎನ್‌ಸಿಪಿ ಫಡ್ನಾವೀಸ್ ಸಿಎಂ ಆಗುವುದರ ಪರವಾಗಿದೆ. ಹೀಗಾಗಿ ಮಹಾಯುತಿಯಲ್ಲಿ ಚೌಕಾಶಿ ವ್ಯವಹಾರ ಈಗ ದೆಹಲಿಗೆ ಶಿಫ್ಟ್ ಆಗಿದೆ. ಸಿಎಂ ಆಯ್ಕೆಗೆ ಇನ್ನೂ ಎರಡ್ಮೂರು ದಿನ ಬೇಕಾಗಬಹುದು ನಂತರವೇ ಪ್ರಮಾಣ ವಚನ ಸ್ವೀಕಾರ ದಿನಾಂಕ ನಿಗದಿ ಆಗಲಿದೆ ಎನ್ನಲಾಗುತ್ತಿದೆ.