ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ ಕಾಣಿಸಿಕೊಂಡಿದ್ದು, ಶಿವಸೇನೆಯು ಮತ್ತೆ ಬಿಜೆಪಿ ಜೊತೆಗೆ ಕೈ ಜೋಡಿಸಲು ಮುಂದಾಗಿದೆ.
ಬಿಜೆಪಿಯು ಎನ್‍ಸಿಪಿಯ ಮನವೊಲಿಸುವ ತಂತ್ರವನ್ನು ಅನುಸರಿಸಲು ಶುರು ಮಾಡಿದೆ ಎಂಬ ಮಾಹಿತಿ ಶಿವಸೇನೆಗೆ ಲಭ್ಯವಾಗಿದೆ. ಇದರಿಂದಾಗಿ ಎಚ್ಚೆತ್ತುಕೊಂಡ ಶಿವಸೇನೆ, 50-50 ಮುಖ್ಯಮಂತ್ರಿ ಸೂತ್ರಕ್ಕೆ ಹಿಂತಿರುಗಿದರೆ ಬಿಜೆಪಿಯೊಂದಿಗೆ ಮತ್ತೆ ಮೈತ್ರಿಗೆ ಸಿದ್ಧ ಎಂದು ತಿಳಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕಲಾಪದಲ್ಲಿ ಎನ್‍ಸಿಪಿಯನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ
ಈ ಮಧ್ಯೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಎನ್‍ಸಿಪಿ ನಾಯಕ ಶರದ್ ಪವಾರ್, ನಾವು ಬಿಜೆಪಿ ಜೊತೆಗೆ ಯಾವುದೇ ಮಾತುಕತೆ ನಡೆಸಿಲ್ಲ. ಇದೆಲ್ಲ ಊಹಾಪೋಹ ಅಷ್ಟೇ. ನಮ್ಮ ಮೈತ್ರಿ ಪಕ್ಷ ಕಾಂಗ್ರೆಸ್‍ನೊಂದಿಗೆ ಚರ್ಚೆ ನಡೆಸಿ ಬಳಿಕ ಶಿವಸೇನೆ ಜೊತೆಗೆ ಸಮ್ಮಿಶ್ರ ಸರ್ಕಾರದ ಸೂತ್ರ ರಚಿಸುತ್ತೇವೆ ಎಂದು ಹೇಳಿದ್ದರು.
ಶಿವಸೇನೆ ಮುಖ್ಯಸ್ಥ ಸಂಜಯ್ ರಾವತ್ ಮಂಗಳವಾರ ಮಾತನಾಡಿ, ಶರದ್ ಪವಾರ್ ಮತ್ತು ನಮ್ಮ ಮೈತ್ರಿಯ ಬಗ್ಗೆ ಚಿಂತಿಸಬೇಡಿ. ಶೀಘ್ರದಲ್ಲೇ ಡಿಸೆಂಬರ್ ಮೊದಲ ವಾರದಲ್ಲಿ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಇದು ಸ್ಥಿರವಾದ ಸರ್ಕಾರವಾಗಲಿದೆ ಹೇಳಿದ್ದಾರೆ.
ಶರದ್ ಪವಾರ್ ಏನು ಹೇಳುತ್ತಾರೆಂದು ಅರ್ಥಮಾಡಿಕೊಳ್ಳಲು 100 ಜನರು ಬೇಕಾಗುತ್ತವೆ ಎಂದರು. ಸೋಮವಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭೇಟಿ ಬಳಿಕ ಮಾತನಾಡಿದ್ದ ರಾವತ್, ಸರ್ಕಾರ ರಚನೆ ಮಾಡಬೇಕಾದವರೇ ಓಡಿ ಹೋಗಿದ್ದಾರೆ ಎಂದು ಬಿಜೆಪಿ ವಿರುದ್ಧ ಗುಡುಗಿದ್ದರು.
ಬಿಜೆಪಿ ಹೊರತಾದ ಮೈತ್ರಿಕೂಟದಲ್ಲಿರುವ ಕಾಂಗ್ರೆಸ್ ಹಾಗೂ ಶಿವಸೇನೆ ಸೈದ್ಧಾಂತಿಕವಾಗಿ ಭಿನ್ನವಾಗಿವೆ. ಹೀಗಾಗಿ ಕಾಂಗ್ರೆಸ್ ಎಚ್ಚರದ ಹೆಜ್ಜೆ ಇಡುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಕೈ ಜೋಡಿಸಿದರೆ ಕೇರಳದಲ್ಲಿ ಮುಸ್ಲಿಂ ಮತಗಳನ್ನು ಕಳೆದುಕೊಳ್ಳುತ್ತವೆ ಎನ್ನುವ ಚಿಂತೆ ಕಾಂಗ್ರೆಸ್‍ಗೆ ಶುರುವಾಗಿದೆ. ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರವಾದ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬಂದಿದ್ದರು.
ಶರದ್ ಪವಾರ್ ಅವರು ಸೋನಿಯಾ ಗಾಂಧಿ ಅವರನ್ನು ದೆಹಲಿಯಲ್ಲಿ ಸೋಮವಾರ ಭೇಟಿಯಾಗಿದ್ದರು. ಸುಮಾರು ಒಂದು ಗಂಟೆಯ ಚರ್ಚೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಪವಾರ್ ಅವರು, ಎರಡು ಪಕ್ಷಗಳು ಮಧ್ಯೆ ಹೆಚ್ಚಿನ ಚರ್ಚೆಯ ಅಗತ್ಯವಿದೆ ಎಂದು ಹೇಳಿದ್ದರು.