Connect with us

Latest

ನಾನು ಮಹಾರಾಷ್ಟ್ರ ಸಿಎಂ ಆಗುತ್ತೇನೆ – ರಾಜ್ಯಪಾಲರಿಗೆ ಪತ್ರ ಬರೆದ ರೈತ

Published

on

ಮುಂಬೈ: ನಾನು ಮಹಾರಾಷ್ಟ್ರ ಮುಖ್ಯಮಂತ್ರಿಯಾಗುತ್ತೇನೆ ಎಂದು ರೈತರೊಬ್ಬರು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರಿಗೆ ಪತ್ರ ಬರೆದಿದ್ದಾರೆ.

ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಕೂಟ ಬಹುಮತ ಪಡೆದಿದೆ. ಆದರೆ ಈ ಎರಡು ಪಕ್ಷದಲ್ಲೂ ಸಿಎಂ ಗಾದಿಗೆ ಜಟಾಪಟಿ ನಡೆಯುತ್ತಿದ್ದು, ಅವರ ಒಳಜಗಳ ಮುಗಿಯುವ ತನಕ ನಾನೇ ಸಿಎಂ ಆಗುತ್ತೇನೆ ಎಂದು ರೈತರೊಬ್ಬರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೇಜ್ ತಾಲೂಕಿನ ವಡಮೌಳಿ ಎಂಬ ಗ್ರಾಮದ ಶ್ರೀಕಂಠ ವಿಷ್ಣು ಗಡಲೆ ರಾಜ್ಯಪಾಲರಿಗೆ ಪತ್ರ ಬರೆದ ರೈತ. ಮೈತ್ರಿಪಕ್ಷಗಳು ಸಿಎಂ ಗಾದಿಗೆ ಕಿತ್ತಾಟ ನಡೆಸುತ್ತಿವೆ. ಅವರು ಯಾರು ಸಿಎಂ ಆಗಬೇಕು ಎಂದು ತೀರ್ಮಾನ ಮಾಡುವರೆಗೂ ನಾನು ಸಿಎಂ ಆಗುತ್ತೇನೆ ಎಂದು ಪತ್ರ ಬರೆದು ಬೀಡ್ ಜಿಲ್ಲೆಯ ಜಿಲ್ಲಾಧಿಕಾರಿಗೆ ನೀಡಿ ಇದನ್ನು ರಾಜ್ಯಪಾಲರಿಗೆ ತಲುಪಿಸುವಂತೆ ಕೋರಿದ್ದಾರೆ.

ಪತ್ರದಲ್ಲೇನಿದೆ?
ರಾಜ್ಯದಲ್ಲಿ ಇತ್ತೀಚಿಗೆ ವಿಧಾನಸಭೆ ಚುನಾವಣೆ ನಡೆದಿದ್ದು, ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟವು ಜಯಗೊಳಿಸಿದೆ. ಆದರೆ ಈ ಎರಡು ಪಕ್ಷಗಳ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಜಟಾಪಟಿ ಆರಂಭವಾಗಿದೆ. ರಾಜ್ಯದಲ್ಲಿ ಪ್ರಕೃತಿ ವಿಕೋಪ, ತೀವ್ರ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟ ಸಮಯದಲ್ಲಿ ಮಿತ್ರಪಕ್ಷಗಳು ಅಧಿಕಾರಕ್ಕಾಗಿ ಕಿತ್ತಾಟ ಮಾಡುತ್ತಿವೆ. ಆದ್ದರಿಂದ ನೀವು ನನಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಬರೆಯಲಾಗಿದೆ.

ಇದರ ಜೊತೆ ನಾನು ಸಿಎಂ ಆದರೆ ರಾಜ್ಯದ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಅವರಿಗೆ ನ್ಯಾಯ ಕೊಡಿಸುತ್ತೇನೆ. ಹಾಗಾಗಿ ನನಗೆ ಸಿಎಂ ಸ್ಥಾನ ನೀಡಬೇಕು ಎಂದು ಬರೆದಿದ್ದಾರೆ. ನಮ್ಮ ಪತ್ರವನ್ನು ಗಣನೆಗೆ ತೆಗೆದುಕೊಳ್ಳದೇ ಇದ್ದರೆ, ನಾನು ಇದರ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.

ವಿಧಾನಸಭೆ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಜೊತೆಗೆ ಮಿತ್ರಪಕ್ಷ ಶಿವಸೇನೆ 50:50ರ ಸೂತ್ರಕ್ಕೆ ಪಟ್ಟು ಹಿಡಿದಿದೆ. ಎರಡೂವರೆ ವರ್ಷ ಸಿಎಂ ಗಾದಿ ಮತ್ತು ಸಚಿವ ಸಂಪುಟದಲ್ಲಿ ಶೇ.50 ಖಾತೆಗಳಿಗೆ ಅದು ಪಟ್ಟು ಹಿಡಿದಿದ್ದು, ಇದಕ್ಕೆ ಬಿಜೆಪಿ ಒಪ್ಪಿಲ್ಲದ ಕಾರಣ ಸರ್ಕಾರ ರಚನೆ ಕಗ್ಗಂಟಾಗಿ ಉಳಿದಿದೆ.

Click to comment

Leave a Reply

Your email address will not be published. Required fields are marked *