ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಬಣದ ನಾಯಕ ಬಾಬಾ ಸಿದ್ದಿಕಿ (Baba Siddique) ಅವರು ಮುಂಬೈನ ಬಾಂದ್ರಾದಲ್ಲಿ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾರೆ.
ಬಾಂದ್ರಾ ಪೂರ್ವದ ಶಾಸಕರಾಗಿರುವ ಅವರ ಪುತ್ರ ಜೀಶಾನ್ ಅವರ ಕಚೇರಿಯಲ್ಲಿ ಶನಿವಾರ ರಾತ್ರಿ 9:30 ರ ಸುಮಾರಿಗೆ ಸಿದ್ದಿಕಿ ಮೇಲೆ ಮೂರು ಗುಂಡುಗಳನ್ನು ಹಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಸಿದ್ದಿಕಿ ಮೇಲೆ ದುಷ್ಕರ್ಮಿಗಳು ಮೂರು ಗುಂಡುಗಳನ್ನು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಸಚಿವರನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ಗುಂಡು ಎದೆಗೆ ತಗುಲಿದ್ದರಿಂದ ಅವರು ಸಾವಿಗೀಡಾಗಿದ್ದಾರೆ.
ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಸಿದ್ದಿಕಿ ಅವರು 48 ವರ್ಷಗಳ ಕಾಲ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಫೆಬ್ರವರಿಯಲ್ಲಿ ಪಕ್ಷವನ್ನು ತೊರೆದು ಅಜಿತ್ ಪವಾರ್ ಅವರ ಎನ್‌ಸಿಪಿಗೆ ಸೇರಿದ್ದರು. ಜೀಶನ್ ಸಿದ್ದಿಕಿ ಅವರನ್ನು ಆಗಸ್ಟ್‌ನಲ್ಲಿ ಕಾಂಗ್ರೆಸ್‌ನಿಂದ ಉಚ್ಛಾಟಿಸಲಾಗಿತ್ತು.