Connect with us

Latest

ಮಹಾರಾಷ್ಟ್ರದಲ್ಲಿ ಗೆದ್ದರೂ ಕಳೆಗುಂದಿದ ಬಿಜೆಪಿ

Published

on

ಮುಂಬೈ: ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿಗೇರಿದ್ದ ಬಿಜೆಪಿಗೆ ಮೊದಲ ಬಾರಿಗೆ ಎದುರಿಸಿದ್ದ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಯಶಸ್ವಿಯಾಗಿದ್ದು, ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿಗೇರಿದೆ.

ಮಹಾರಾಷ್ಟ್ರದಲ್ಲಿ ಮಿಷನ್ 275 ಹಾಗೂ ಹರಿಯಾಣದಲ್ಲಿ ಮಿಷನ್ 75 ಗುರಿ ಇಟ್ಟುಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದ ಬಿಜೆಪಿಗೆ ಹಿನ್ನಡೆಯಾಗಿದ್ದು, ಮಹಾರಾಷ್ಟ್ರದಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೂ, ಬಿಜೆಪಿ ಅಧಿಕಾರಕ್ಕೇರಿದೆ. ಹರ್ಯಾಣದಲ್ಲಿ ಸರಳ ಬಹುಮತ ಸಿಗದಿದ್ದರೂ ಕೂಡ ಪಕ್ಷೇತರರ ನೆರವಿನೊಂದಿಗೆ ಸರ್ಕಾರ ರಚನೆಗೆ ಮುಂದಾಗಿದೆ.

ಮಹಾರಾಷ್ಟ್ರ ಫಲಿತಾಂಶ: ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರ ರಚಿಸಲು 145 ಸ್ಥಾನಗಳ ಸರಳ ಬಹುಮತ ಅಗತ್ಯವಿದೆ. ಚುನಾವಣೆಯಲ್ಲಿ ಶಿವಸೇನೆಯೊಂದಿಗೆ ಮೈತ್ರಿ ಮೂಲಕ ಕಣಕ್ಕೆ ಇಳಿದಿದ್ದ ಬಿಜೆಪಿ ಮೈತ್ರಿಗೆ ಒಟ್ಟು 159 ಸ್ಥಾನಗಳು ಲಭಿಸಿದೆ. ಇತ್ತ ಎನ್‍ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿದಿದ್ದ ಕಾಂಗ್ರೆಸ್ ಮೈತ್ರಿಗೆ ಒಟ್ಟು 105 ಸ್ಥಾನಗಳು ಲಭಿಸಿದ್ದು, ಇತರೇ 24 ಸ್ಥಾನಗಳಲ್ಲಿ ಗೆಲುವು ಲಭಿಸಿದೆ.

ಮೈತ್ರಿ ಧರ್ಮದ ಅನ್ವಯ 164 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ 103 ಕ್ಷೇತ್ರಗಳಲ್ಲಿ ಗೆಲುವು ಪಡೆದರೆ, ಶಿವಸೇನೆ ಸ್ಪರ್ಧಿಸಿದ್ದ 126 ಕ್ಷೇತ್ರಗಳಲ್ಲಿ 55 ರಲ್ಲಿ ಗೆಲುವು ಪಡೆದಿದೆ. ಕಾಂಗ್ರೆಸ್ 147 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು 44 ರಲ್ಲಿ ಗೆಲುವು ಪಡೆದಿದೆ. 121 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎನ್‍ಸಿಪಿ 54 ಸ್ಥಾನಗಳು ಲಭಿಸಿದೆ.

ಸದ್ಯ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಅಧಿಕಾರಕ್ಕೇರಿದ್ದರೂ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕಾರಿ ಪ್ರಶ್ನೆ ಉದ್ಭವಿಸಿದ್ದು, ಅಧಿಕಾರ ರಚನೆಗೆ ಬೇಕಾದ ನಂಬರ್ ಗಳಿಸಿದ್ದರೂ ಬಿಜೆಪಿಗೆ ಮಿತ್ರಪಕ್ಷ ಶಿವಸೇನೆ ಬಿಸಿತುಪ್ಪವಾಗಿದೆ. ಫಲಿತಾಂಶ ಗಮನಿಸಿದ ಶಿವಸೇನೆ, ಸಿಎಂ ಪಟ್ಟದ ಕನಸು ಕಂಡು ಎನ್‍ಸಿಪಿ ಜೊತೆ ಮೈತ್ರಿಗೆ ಚಿಂತನೆ ನಡೆಸಿತ್ತು. ಆದರೆ, ಕೂಡಲೇ ಸುದ್ದಿಗೋಷ್ಠಿ ನಡೆಸಿದ ಶರದ್ ಪವಾರ್, ಅಧಿಕಾರಕ್ಕಾಗಿ ಶಿವಸೇನೆ ಜೊತೆ ಹೋಗಲ್ಲ. ನಾವು ಮೈತ್ರಿ ಮಾಡಿಕೊಂಡವರ ಜೊತೆಯೇ ಇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಸುದ್ದಿಗೋಷ್ಠಿ ನಡೆಸಿದ ಶಿವಸೇನೆಯ ಉದ್ಧವ್ ಠಾಕ್ರೆ, ಬಿಜೆಪಿ ಮುಂದೆ 50-50 ಫಾರ್ಮುಲ ಮುಂದಿಟ್ಟರು. ಚುನಾವಣೆಗೆ ಮೊದಲೇ ಈ ಸೂತ್ರದ ಬಗ್ಗೆ ಚರ್ಚೆ ಆಗಿದೆ ಎಂದು ತಿಳಿಸಿದರು. ಇತ್ತ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ದೇವೇಂದ್ರ ಫಡ್ನವೀಸ್, ನಮಗೆ ಸ್ಪಷ್ಟ ಜನಾದೇಶ ಸಿಕ್ಕಿದೆ. ಮುಂದಿನ ಸರ್ಕಾರ ರಚಿಸುತ್ತೇವೆ ಎಂದರು ತಿಳಿಸಿದರು.

ವಿಐಪಿ ಅಭ್ಯರ್ಥಿಗಳ ಫಲಿತಾಂಶ: ಕಳೆದ 5 ವರ್ಷದ ಸರ್ಕಾರವನ್ನು ಮುನ್ನಡೆಸಿದ್ದ ಸಿಎಂ ದೇವೇಂದ್ರ ಫಡ್ನವೀಸ್ ನೈಋತ್ಯ ನಾಗ್ಪುರ್ ಕ್ಷೇತ್ರದಿಂದ ಗೆಲುವು ಪಡೆದಿದ್ದಾರೆ. ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದ ಠಾಕ್ರೆ ಕುಟುಂಬದ ಆದಿತ್ಯ ಠಾಕ್ರೆ ವರ್ಲಿ ಕ್ಷೇತ್ರದಿಂದ ಗೆಲುವು ಪಡೆದಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಚೌವ್ಹಾಣ್ ಅವರು ಬೋಕರ್ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದಾರೆ. ಪೃಥ್ವಿರಾಜ್ ಚೌವ್ಹಾಣ್ ಅವರು ಕರಾಡ್ ದಕ್ಷಿಣ ಕ್ಷೇತ್ರದಿಂದ ಗೆಲುವು ಪಡೆದಿದ್ದಾರೆ. ಎನ್‍ಸಿಪಿಯ ಅಜಿತ್ ಪವಾರ್, ಬಾರಾಮತಿ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದು, ಸಹೋದರ ಸಂಬಂಧಿ ವಿರುದ್ಧ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಪಂಕಜಾ ಮುಂಡೆ, ಪರ್ಲಿ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ.

Click to comment

Leave a Reply

Your email address will not be published. Required fields are marked *