ನವದೆಹಲಿ: ಈ ವರ್ಷ ಮೂರನೇ ಬಾರಿಗೆ ಸುಪ್ರೀಂ ಕೋರ್ಟಿನಲ್ಲಿ ರಜಾ ದಿನದಂದು ಕಲಾಪ ನಡೆದಿದೆ.
ಹೌದು. ಭಾನುವಾರ ನ್ಯಾಯಾಲಯಕ್ಕೆ ರಜಾದಿನ. ಆದರೆ ಇಂದು ಮಹಾರಾಷ್ಟ್ರದಲ್ಲಿ ಬಹುಮತ ಇಲ್ಲದಿದ್ದರೂ ಫಡ್ನಾವಿಸ್ ಅವರಿಗೆ ಸರ್ಕಾರ ರಚನೆಗೆ ಅವಕಾಶ ಕೊಟ್ಟ ರಾಜ್ಯಪಾಲರ ವಿರುದ್ಧ ಶಿವಸೇನೆ, ಕಾಂಗ್ರೆಸ್, ಎನ್‍ಸಿಪಿ ಸುಪ್ರೀಂನಲ್ಲಿ ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆ ಇಂದು ನ್ಯಾ.ಎನ್‍ವಿ ರಮಣ, ಅಶೋಕ್ ಭೂಷಣ್, ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು. ಈ ಮೂಲಕ ಒಂದೇ ವರ್ಷ ಮೂರು ಬಾರಿ ರಜಾದಿನದಲ್ಲಿ ಕಲಾಪ ನಡೆದು ಸುಪ್ರೀಂ ಕೋರ್ಟ್ ಇತಿಹಾಸ ಸೃಷ್ಟಿಸಿದೆ.
ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಾಗ ಏಪ್ರಿಲ್ 20ರ ಶನಿವಾರ ತುರ್ತು ವಿಚಾರಣೆ ನಡೆದಿತ್ತು.
ಅಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದದ ತೀರ್ಪನ್ನು ರಂಜನ್ ಗೊಗೊಯ್ ನೇತೃತ್ವದ ಸಂವಿಧಾನ ಪೀಠ ನ.9 ರಂದು ಪ್ರಕಟಿಸಿತ್ತು. ವಿಶೇಷ ಏನೆಂದರೆ ಸಾಧಾರಣವಾಗಿ ಕೋರ್ಟ್ ತೀರ್ಪುಗಳು ಪ್ರಕಟವಾಗುವ ದಿನಾಂಕವನ್ನು ಒಂದು, ಎರಡು ದಿನದ ಮೊದಲೇ ಪ್ರಕಟಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಶುಕ್ರವಾರ ರಾತ್ರಿ 8:45ಕ್ಕೆ ಶನಿವಾರ ತೀರ್ಪು ಪ್ರಕಟವಾಗಲಿದೆ ಎಂದು ಪ್ರಕಟಿಸಲಾಗಿತ್ತು.
ಶನಿವಾರ ಬೆಳಗ್ಗೆ ರಾಷ್ಟ್ರಪತಿ ಆಡಳಿತವನ್ನು ರದ್ದು ಮಾಡಿ ಬೆಳಗ್ಗೆ ಮಹಾರಾಷ್ಟ್ರ ರಾಜ್ಯಪಾಲರು ದೇವೇಂದ್ರ ಫಡ್ನಾವಿಸ್ ಅವರಿಗೆ ಪ್ರಮಾಣವಚನ ಬೋಧಿಸಿದ್ದರು. ಬಹುಮತ ಇಲ್ಲದೇ ಇದ್ದರೂ ರಾಜ್ಯಪಾಲರು ಸರ್ಕಾರ ರಚಿಸಲು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಶಿವಸೇನೆ, ಕಾಂಗ್ರೆಸ್, ಎನ್‍ಸಿಪಿ ತುರ್ತು ವಿಚಾರಣೆ ನಡೆಸಬೇಕೆಂದು ಶನಿವಾರ ಅರ್ಜಿ ಸಲ್ಲಿಸಿದ್ದು ರಾತ್ರಿ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ನಿಗದಿಯಾಗಿತ್ತು.
ಕಳೆದ ವರ್ಷ ಕರ್ನಾಟಕದಲ್ಲಿ ರಾಜ್ಯಪಾಲರು ಪ್ರಮಾಣವಚನ ಸ್ವೀಕರಿಸಿ ಬಹುಮತ ಸಾಬೀತು ಪಡಿಸಲು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಪ್ರಶ್ನಿಸಿದಾಗಲೂ ಮಧ್ಯರಾತ್ರಿಯಲ್ಲಿ ವಿಚಾರಣೆ ನಡೆದಿತ್ತು.
1993ರ ಮುಂಬೈ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಸಲ್ಲಿಸಲಾಗಿದ್ದ ತುರ್ತು ಅರ್ಜಿ ವಿಚಾರಣೆ 2015ರ ಜುಲೈ 29ರ ರಾತ್ರಿ ನಡೆದಿತ್ತು. ಸುಪ್ರೀಂ ಕೋರ್ಟ್ ತಡೆ ನೀಡದ ಹಿನ್ನೆಲೆಯಲ್ಲಿ ಜುಲೈ 30ರಂದು ಮೆಮನ್‍ನ್ನು ಗಲ್ಲಿಗೇರಿಸಲಾಗಿತ್ತು.
ರಿಸರ್ವ್ ಬ್ಯಾಂಕ್ ದೂರಿನ ಆಧಾರದಲ್ಲಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ(ಎಫ್‌ಇಆರ್‌ಎ) ಉಲ್ಲಂಘಿಸಿದ ಆರೋಪದ ಅಡಿ 1985 ರಲ್ಲಿ ಉದ್ಯಮಿ ಎಲ್ ಎಂ ಥಾಪರ್ ಬಂಧನವಾಗಿತ್ತು. ಈ ವೇಳೆ ಅಂದಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಇಎಸ್ ವೆಂಕಟರಾಮಣಯ್ಯ ಅವರು ಮಧ್ಯರಾತ್ರಿ ಎದ್ದು ವಿಚಾರಣೆ ನಡೆಸಿ ಥಾಪರ್ ಅವರಿಗೆ ಜಾಮೀನು ಮಂಜೂರು ಮಾಡಿದ್ದರು. ಮಧ್ಯರಾತ್ರಿ ತುರ್ತು ವಿಚಾರಣೆಗೆ ಒಪ್ಪಿ ಜಾಮೀನು ಮಂಜೂರು ಮಾಡಿದ್ದು ಬಹಳ ಚರ್ಚೆಗೆ ಗ್ರಾಸವಾಗಿತ್ತು.
1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ಬಳಿಕ ಡಿ.6 ಮತ್ತು 7ರ ಮಧ್ಯರಾತ್ರಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ನಿರಂತರ ವಿಚಾರಣೆ ನಡೆದಿತ್ತು.