Connect with us

Latest

ಸಂಪುಟ ರಚನೆ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಭುಗಿಲೆದ್ದ ಅಸಮಾಧಾನ

Published

on

– ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸ್ವತಃ ಸಂಜಯ್ ರಾವತ್ ಗೈರು
– ರಾಗಾ ಭೇಟಿ ಮಾಡಿ ಅಳಲು ತೋಡಿಕೊಂಡ ಕಾಂಗ್ರೆಸ್ ನಾಯಕರು
– ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದ ಎನ್‍ಸಿಪಿ ನಾಯಕ

ಮುಂಬೈ: ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದ್ದು, ಮೈತ್ರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವ ಸೇನೆ ನಾಯಕ ಸಂಜಯ್ ರಾವತ್ ಅವರೇ ಪ್ರಮಾಣ ವಚನ ಸಮಾರಂಭಕ್ಕೆ ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಇದೀಗ ಕಾಂಗ್ರೆಸ್ ನಾಯಕರು ಅಸಮಾಧಾನ ಹೊರ ಹಾಕಿದ್ದು, ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಮಹಾರಾಷ್ಟ್ರದ ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ್ ಚೌವ್ಹಾಣ್ ಸೇರಿದಂತೆ ಹಲವು ನಾಯಕರು ಅಸಮಾಧಾನಗೊಂಡಿದ್ದಾರೆ. ಪಕ್ಷದ ನಿಷ್ಠಾವಂತ ನಾಯಕರಾದ ಚೌವ್ಹಾಣ್, ನಸೀಮ್ ಖಾನ್, ಪ್ರಣಿತಿ ಶಿಂಧೆ, ಸಂಗ್ರಾಮ್ ತೋಪ್ಟೆ, ಅಮಿನ್ ಪಟೇಲ್ ಹಾಗೂ ರೋಹಿದಾಸ್ ಪಾಟೀಲ್ ಅವರು ಸೋಮವಾರ ಸಂಜೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ದೆಹಲಿಯ ಅವರ ನಿವಾಸದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ.

ಸೋಮವಾರವಷ್ಟೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಹಾಗೂ 34 ಇತರ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಮೂಲಕ ಸರ್ಕಾರ ರಚನೆಯಾಗಿ ಒಂದು ತಿಂಗಳ ನಂತರ ಸಚಿವ ಸಂಪುಟ ರಚನೆಯ ಪ್ರಹಸನಕ್ಕೆ ವಿರಾಮ ಬಿದ್ದಿತ್ತು. ಇದೀಗ ಕಾಂಗ್ರೆಸ್ ಹಾಗೂ ಸ್ವತಃ ಕೆಲ ಶಿವಸೇನೆ ನಾಯಕರಲ್ಲಿಯೇ ಅಸಮಾಧಾನ ಭುಗಿಲೆದ್ದಿದ್ದು, ಇದು ಸಿಎಂ ಉದ್ಧವ್ ಠಾಕ್ರೆಗೆ ಸವಾಲಾಗಿ ಪರಿಣಮಿಸಿದೆ.

ಈ ಮಧ್ಯೆ ತಮ್ಮ ಸಹೋದರನಿಗೆ ಸಂಪುಟದಲ್ಲಿ ಸ್ಥಾನ ನೀಡಿಲ್ಲ ಎನ್ನುವ ಕಾರಣಕ್ಕೆ ಶಿವಸೇನೆ ಸಂಸದ ಹಾಗೂ ಮಹಾ ವಿಕಾಸ್ ಅಘಾಡಿ ಮೈತ್ರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜಯ್ ರಾವತ್ ಪ್ರಮಾಣ ವಚನ ಸಮಾರಂಭಕ್ಕೆ ಭಾಗವಹಿಸಿಲ್ಲ ಎಂದು ಹೇಳಲಾಗಿದೆ.

ಕಾಂಗ್ರೆಸ್ ನಾಯಕರ ಪಟ್ಟಿಯಲ್ಲಿ ಸೋಮವಾರ ಅಶೋಕ್ ಚೌವ್ಹಾಣ್, ದಿಲೀಪ್ ವಾಸ್ಲೆ ಪಾಟೀಲ್, ಧನಂಜಯ್ ಮುಂಡೆ, ಸುನೀಲ್ ಛತ್ರಪಾಲ್ ಕೇದಾರ್ ಹಾಗೂ ಕೆ.ಸಿ.ಪಡ್ವಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೆ ಇವರಿಗೆ ಖಾತೆ ಹಂಚುವ ಕಸರತ್ತು ಸಹ ಇನ್ನೂ ನಡೆಯಬೇಕಿದೆ. ಇನ್ನು ಎರಡ್ಮೂರು ದಿನಗಳಲ್ಲಿ ಖಾತೆಗಳನ್ನು ಹಂಚಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

ಸರ್ಕಾರ ರಚನೆಯಾಗಿ ತಿಂಗಳ ನಂತರ ಸಿಎಂ ಸಚಿವ ಸಂಪುಟ ರಚನೆ ಮಾಡಿದ್ದು, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಅಳಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಜಿತ್ ಪವಾರ್ ಕಳೆದ ತಿಂಗಳು ಬಿಜೆಪಿ ಜೊತೆಗೆ ತೆರಳಿ ಬೆಳಗಿನ ಜಾವವೇ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಬಹುಮತ ಸಾಬೀತಿಗೆ ಸೂಚಿಸಿದ ಕೆಲವೇ ಗಂಟೆಗಳ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಇತ್ತ ಎನ್‍ಸಿಪಿಯ ಒಂದು ವಿಕೆಟ್ ಪತನವಾಗುವ ಹಂತ ತಲುಪಿದ್ದು, ಸಚಿವ ಸಂಪುಟ ರಚನೆಯಾದ ಕೆಲವೇ ಗಂಟೆಗಳ ನಂತರ ಎನ್‍ಸಿಪಿ ಶಾಸಕ ಪ್ರಕಾಶ್ ಸೋಳಂಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರ ಪ್ರಕಟಿಸಿದ್ದಾರೆ. ನಾನು ರಾಜಕೀಯಕ್ಕೆ ಅರ್ಹನಲ್ಲ ಹೀಗಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಪ್ರಚೋದನೆ ನೀಡುವ ದೃಷ್ಟಿಯಿಂದ ನಾನು ರಾಜೀನಾಮೆ ನೀಡುತ್ತಿಲ್ಲ. ಈ ಕುರಿತು ನಾನು ಎನ್‍ಸಿಪಿ ನಾಯಕರಿಗೆ ತಿಳಿಸಿದ್ದೇನೆ. ಸ್ಪೀಕರ್ ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ನನ್ನ ರಾಜೀನಾಮೆಗೂ ಸಂಪುಟ ರಚನೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *