ಅಧಿಕಾರಿಗಳಿಗೆ ಹೈಕೋರ್ಟ್ ಚಾಟಿ – ಕಾರ್ಯಾಚರಣೆಗೆ ತಡೆ
ಮುಂಬೈ: ನಾಗ್ಪುರದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಿದ ಪ್ರಮುಖ ಆರೋಪಿ ಫಹೀಮ್ ಖಾನ್‍ನ ಮನೆ ಮತ್ತು ಇತರೆ ಕಟ್ಟಡಗಳ ಮೇಲೆ ಮಹಾರಾಷ್ಟ್ರ ಸರ್ಕಾರ ಬುಲ್ಡೋಜರ್ ಅಸ್ತ್ರ ಪ್ರಯೋಗಿಸಿದೆ.
- Advertisement 2-
ಫಹೀಮ್ ಖಾನ್ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ನಾಗ್ಪುರ ಪಾಲಿಕೆ ನೊಟೀಸ್ ನೀಡಿತ್ತು. ಇದೀಗ ಬುಲ್ಡೋಜರ್ ಹರಿಸಿ ಎಲ್ಲವನ್ನು ನೆಲಸಮ ಮಾಡಿದ್ದೇವೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಈ ಮಧ್ಯೆ, ಮಹಾರಾಷ್ಟ್ರ ಸರ್ಕಾರದ ಬುಲ್ಡೋಜರ್ ಆಪರೇಷನ್‌ನ್ನು ಯತ್ನಾಳ್ ಸ್ವಾಗತಿಸಿದ್ದಾರೆ.
- Advertisement 3-
- Advertisement 4-
ನಾಗ್ಪುರ ಹಿಂಸಾಚಾರ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಆಸ್ತಿಗಳನ್ನು ಸೋಮವಾರ (ಮಾ.24) ರಂದು ನೆಲಸಮ ಮಾಡಿದ ನಂತರ ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಎಂಸಿ) ಅಧಿಕಾರಿಗಳನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಮತ್ತು ನ್ಯಾಯಮೂರ್ತಿ ವೃಶಾಲಿ ಜೋಶಿ ಅವರಿದ್ದ ವಿಭಾಗೀಯ ಪೀಠವು ಈ ನಡೆಯನ್ನು ‘ಉಗ್ರವಾದ ವರ್ತನೆ’ ಎಂದು ಕರೆದಿದೆ. ಮನೆ ಅಕ್ರಮ ಎಂದು ಮನೆಯ ಮಾಲೀಕರಿಗೆ ಏಕೆ ನೋಟಿಸ್ ನೀಡಲಾಗಿಲ್ಲ? ಆಸ್ತಿಯನ್ನು ಕೆಡವುವ ಮೊದಲು ಅವರಿಗೆ ಏಕೆ ವಿಚಾರಣೆ ನಡೆಸಲಾಗಿಲ್ಲ? ಈ ಕಾರ್ಯಾಚರಣೆ ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಿಕೊಂಡಿದೆಯೇ? ಎಂದು ವಿಭಾಗೀಯ ಪೀಠವು ನಿಗಮವನ್ನು ಪ್ರಶ್ನಿಸಿತು. ಅಲ್ಲದೇ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಮಾರ್ಚ್ 17 ರಂದು ಭುಗಿಲೆದ್ದ ಹಿಂಸಾಚಾರದ ಮಾಸ್ಟರ್‌ಮೈಂಡ್ ಎಂದು ಆರೋಪಿಸಲಾಗಿರುವ ಫಹೀಮ್ ಶಮೀಮ್ ಖಾನ್ (Fahim Shamim Khan) ಎಂಬಾತನನ್ನು ನಾಗ್ಪುರ ಪೊಲೀಸರು (Nagpur Police) ಮಾ.19 ರಂದು ಬಂಧಿಸಿದ್ದರು. ಮೈನಾರಿಟೀಸ್ ಡೆಮೋಕ್ರಟಿಕ್ ಪಾರ್ಟಿಯ (MDP) ನಗರ ಅಧ್ಯಕ್ಷನಾಗಿರುವ ಫಹೀಮ್, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಹಿಂಸಾಚಾರ ಪ್ರಾರಂಭವಾಗುವ ಕೆಲವೇ ಕ್ಷಣಗಳ ಮೊದಲು ಆತ ಭಾವನಾತ್ಮಕ ಭಾಷಣವೊಂದನ್ನು ಮಾಡಿರುವ ವೀಡಿಯೋ ಸಾಕ್ಷ್ಯವೊಂದು ಪೊಲೀಸರ ಕೈಗೆ ಸಿಕ್ಕಿತ್ತು. ಈ ಭಾಷಣವೇ ಎರಡು ಸಮುದಾಯಗಳ ನಡುವಿನ ಘರ್ಷಣೆಗೆ ಕಾರಣವಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.
ಪುಣೆ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗೆ ಮಾತಾಡಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಉಜ್ವಲ್ ಭುಯಾನ್, ಬುಲ್ಡೋಜರ್ ನ್ಯಾಯ ಎಂಬುದು ಸಂವಿಧಾನವನ್ನು ಬುಡಮೇಲು ಮಾಡುವುದಕ್ಕೆ ಸಮ ಎಂದು ಅಭಿಪ್ರಾಯಪಟ್ಟಿದ್ದರು.