– ಯದುವಂಶದ 27ನೇ ಉತ್ತರಾಧಿಕಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಭಾರೀ ಕುತೂಹಲ ಕೆರಳಿಸಿದ್ದ ಮೈಸೂರು-ಕೊಡಗು (Mysuru-Kodagu) ಲೋಕಸಭಾ ಕ್ಷೇತ್ರಕ್ಕೆ ಎರಡು ಬಾರಿ ಸಂಸದರಾಗಿದ್ದ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಬದಲಿಗೆ, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರಿಗೆ ಟಿಕೆಟ್ ನೀಡಲಾಗಿದೆ. ಈಗಾಗಲೇ ಗೆಲುವಿನ ವಿಶ್ವಾಸ ಹೊಂದಿರುವ ಯದುವೀರ್ ಅವರು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಯದುವೀರ್ ಅವರಿಗೆ ಬಿಜೆಪಿಯಿಂದ ಟಿಕೆಟ್ (BJP Ticket) ಸಿಕ್ಕಿರುವುದು ಮೈಸೂರಿನಲ್ಲಿ ರಾಜಪರಿವಾರದವರ ರಾಜಕಾರಣಕ್ಕೆ ಮತ್ತೆ ಚಾಲನೆ ಸಿಕ್ಕಂತಾಗಿದೆ. ಮೈಸೂರು ಸಂಸ್ಥಾನವನ್ನು ಆಳಿದ ಅರಸು ಮನೆತನದವರು, ಸ್ವಾತಂತ್ರ‍್ಯ ನಂತರವೂ ರಾಜಕೀಯದಲ್ಲಿ ಸಕ್ರೀವಾಗಿದ್ದವರು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ದೂರವಿದ್ದರು. ಇದೀಗ ಮೈಸೂರು-ಕೊಡಗು ಕ್ಷೇತ್ರದಿಂದ ಯದುವೀರ್ ಸ್ಪರ್ಧೆಯೊಂದಿಗೆ ಮತ್ತೆ ಮೈಸೂರು ಮಹಾಸಂಸ್ಥಾನದ ರಾಜಕೀಯದ ಪರ್ವ ಮತ್ತೆ ಶುರುವಾಗಿದೆ. ಮೈಸೂರು ಮತ್ತು ಕೊಡಗಿನ ಜನರಿಗೆ ಮೈಸೂರು ರಾಜಮನೆತನ ಬಗ್ಗೆ ಜನರಿಗಿರುವ ಅಭಿಮಾನವನ್ನು ಮತವನ್ನಾಗಿ ಪರಿವರ್ತಿಸಿಕೊಳ್ಳು ಪ್ರಯತ್ನದ ಭಾಗವಾಗಿ ಯದುವೀರ್ ಚುನಾವಣಾ ರಾಜಕಾರಣಕ್ಕೆ ಹೆಜ್ಜೆಯಿಟ್ಟಿದ್ದು, ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
Advertisement
Advertisement
ರಾಜವಂಶಸ್ಥ ಯದುವೀರ್ ಬಗ್ಗೆ ನಿಮಗೆಷ್ಟು ಗೊತ್ತು?
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ಸಂಸ್ಥಾನವನ್ನು ಆಳ್ವಿಕೆ ನಡೆಸಿದ ಯದುವಂಶದ 27ನೇ ಉತ್ತರಾಧಿಕಾರಿ ಆಗಿದ್ದಾರೆ. ಮೈಸೂರು ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಹಾಗೂ ಪ್ರಮೋದಾದೇವಿ ಒಡೆಯರ್ ದಂಪತಿಗೆ ಮಕ್ಕಳಿಲ್ಲದ ಹಿನ್ನೆಲೆಯಲ್ಲಿ 23 ಫೆಬ್ರವರಿ 2015 ರಂದು ಯದುವೀರ್ ಅವರನ್ನು ದತ್ತುಪುತ್ರನಾಗಿ ಸ್ವೀಕಾರ ಮಾಡಲಾಯಿತು. ಇದನ್ನೂ ಓದಿ: Shivamogga Lok Sabha 2024: ಬಿಎಸ್‌ವೈ v/s ಬಂಗಾರಪ್ಪ ಫ್ಯಾಮಿಲಿ – ಯಾರಿಗೆ ಮಣೆ ಹಾಕ್ತಾರೆ ಮಲೆನಾಡ ಜನ?
Advertisement
Advertisement
ಯದುವೀರ್ ಅವರ ಮೊದಲ ಹೆಸರು ‘ಯದುವೀರ್ ಗೋಪಾಲರಾಜೇ ಅರಸ್’. ದತ್ತು ಸ್ವೀಕಾರ ಸಮಾರಂಭದ ನಂತರ ಅವರ ಹೆಸರನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಮರುನಾಮಕರಣ ಮಾಡಲಾಯಿತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾಗಿ 14 ತಿಂಗಳು ಕಳೆದ ನಂತರ ಯದುವೀರ್ ಅವರನ್ನು ಪ್ರಮೋದಾದೇವಿ ಒಡೆಯರ್ ದತ್ತು ಸ್ವೀಕರಿಸಿದರು. ಇದನ್ನೂ ಓದಿ: Mysuru Lok Sabha 2024: ಸಿಎಂಗೆ ಪ್ರತಿಷ್ಠೆ; ಬಿಜೆಪಿಗೆ ಹ್ಯಾಟ್ರಿಕ್ ನಿರೀಕ್ಷೆ – ಮೈಸೂರು-ಕೊಡಗು ಕ್ಷೇತ್ರ ಯಾರ ಕೈಗೆ?
ಯದುವೀರ್ ಅವರ ತಂದೆ ಬೆಟ್ಟದಕೋಟೆ ಅರಸು ಪರಂಪರೆಯವರಾಗಿದ್ದು, ಜಯಚಾಮರಾಜ ಒಡೆಯರ್ ಅವರ ಮರಿಮಗ ಆಗಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸೋದರಿ ಗಾಯತ್ರಿ ದೇವಿ ಮತ್ತು ರಾಮಚಂದ್ರ ಅರಸ್ ಅವರ ಪುತ್ರಿಯಾದ ತ್ರಿಪುರಸುಂದರೀದೇವಿ ಮತ್ತು ಸ್ವರೂಪ್ ಗೋಪಾಲ ರಾಜೇ ಅರಸ್ ಅವರ ಪುತ್ರ. ಬೆಂಗಳೂರಿನ ವಿದ್ಯಾಸಾಗರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ನಂತರ ಬೆಂಗಳೂರಿನ ಕೆನೆಡಿಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಐಬಿ ಡಿಪ್ಲೊಮಾ ಕೋರ್ಸ್ ಪೂರೈಸಿ, ಅಮೆರಿಕದ ಮ್ಯಾಸಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು.
ರಾಜಮನೆತನಕ್ಕೆ ರಾಜಕೀಯ ಹೊಸದಲ್ಲ:
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಬಳಿಕ ಅರಸು ಸಮುದಾಯದ ಯಾರೊಬ್ಬರೂ ಸಿಎಂ ಹುದ್ದೆಗೆ ಏರಲಿಲ್ಲ. ಆದ್ರೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು 4 ಬಾರಿ ಸಂಸದರಾಗಿದ್ದರು. 1984, 1989 ರಲ್ಲಿ ಗೆದ್ದಿದ್ದ ಒಡೆಯರ್ 1991ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ನಂತರ 1996, 1999 ರಲ್ಲಿ ಮತ್ತೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು ಗೆದ್ದು ಸಂಸದರಾದರು. 2004ರಲ್ಲಿ ಕೊನೆಯಬಾರಿಗೆ ಚುನಾವಣೆ ಎದುರಿಸಿದ್ದ ಒಡೆಯರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಅಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ.ಹೆಚ್. ವಿಜಯಶಂಕರ್ ವಿರುದ್ಧ ಸೋತಿದ್ದರು. ನಂತರ ರಾಜಕಾರಣದಿಂದ ಹಿಂದೆ ಸರಿದ್ದರು. ಇದೀಗ ಮತ್ತೆ ಯದುವೀರ್ ಅವರಿಗೆ ಬಿಜೆಪಿ ಮಣೆ ಹಾಕಿದ್ದು, ರಾಜಮನೆತನದ ರಾಜಕೀಯ ಪುನಾರಂಭಗೊಂಡಿದೆ.
ಮೈಸೂರು ರಾಜ್ಯದಿಂದ ಆರಂಭಗೊಂಡ ಚುನಾವಣಾ ಹಾದಿ:
1952- ದ್ವಿಸದಸ್ಯ ಕ್ಷೇತ್ರ- ಎಂ.ಎಸ್. ಗುರುಪಾದಸ್ವಾಮಿ (ಕೆಎಂಪಿಪಿ), ಎನ್. ರಾಚಯ್ಯ ( ಕಾಂಗ್ರೆಸ್)
1957- ದ್ವಿಸದಸ್ಯ ಕ್ಷೇತ್ರ- ಎಂ. ಶಂಕರಯ್ಯ, ಎಸ್.ಎಂ. ಸಿದ್ದಯ್ಯ (ಇಬ್ಬರೂ ಕಾಂಗ್ರೆಸ್)
1962- ಎಂ. ಶಂಕರಯ್ಯ ( ಕಾಂಗ್ರೆಸ್)
1967- ಎಚ್.ಡಿ. ತುಳಸಿದಾಸ್ (ಕಾಂಗ್ರೆಸ್)
1971- ಎಚ್.ಡಿ. ತುಳಸಿದಾಸ್ (ಕಾಂಗ್ರೆಸ್)
1977- ಎಚ್.ಡಿ. ತುಳಸಿದಾಸ್ (ಕಾಂಗ್ರೆಸ್)
1980- ಎಂ. ರಾಜಶೇಖರಮೂರ್ತಿ (ಕಾಂಗ್ರೆಸ್-ಐ)
1984- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)
1989- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)
1991- ಚಂದ್ರಪ್ರಭ ಅರಸು ( ಕಾಂಗ್ರೆಸ್)
1996- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)
1998- ಸಿ.ಎಚ್. ವಿಜಯಶಂಕರ್ (ಬಿಜೆಪಿ)
1999- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)
2004- ಸಿ.ಎಚ್. ವಿಜಯಶಂಕರ್ (ಬಿಜೆಪಿ)
2009- ಎಚ್. ವಿಶ್ವನಾಥ್ (ಕಾಂಗ್ರೆಸ್)
2014- ಪ್ರತಾಪ್ ಸಿಂಹ (ಬಿಜೆಪಿ)
2019- ಪ್ರತಾಪ್ ಸಿಂಹ (ಬಿಜೆಪಿ)
ಕ್ಷೇತ್ರ ಪರಿಚಯ:
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1952 ರಿಂದ 1996 ರ ವರೆಗೆ `ಕೈ’ ಹಿಡಿತದಲ್ಲಿತ್ತು. 1998 ರಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಜಯಗಳಿಸಿ ಮೊದಲ ಬಾರಿಗೆ ಕಮಲ ಅರಳಿಸಿದರು. ಅದಾದ ಬಳಿಕ 2009 ರ ವರೆಗೂ ಒಮ್ಮೆ ಕಾಂಗ್ರೆಸ್, ಒಮ್ಮೆ ಬಿಜೆಪಿ ಎಂಬಂತೆ ಸೋಲು-ಗೆಲುವಿನ ಆಟ ನಡೆದಿತ್ತು. ನಂತರ ದೇಶದಲ್ಲಿ ನರೇಂದ್ರ ಮೋದಿ ಅಲೆ ಇದ್ದ ಸಂದರ್ಭದಲ್ಲಿ ಎರಡು ಅವಧಿಗೆ (2014, 2019) ಬಿಜೆಪಿಯ ಪ್ರತಾಪ್ ಸಿಂಹ ಕ್ಷೇತ್ರವನ್ನು ಪ್ರತಿನಿಧಿಸಿದರು. ಈ ಹಿಂದೆ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳು ದಕ್ಷಿಣ ಕನ್ನಡ ಲೋಕಸಭೆಗೆ ಸೇರಿದ್ದವು. 2009 ಕ್ಕೆ ಅವುಗಳನ್ನು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರಿಸಲಾಯಿತು. ಇದನ್ನೂ ಓದಿ: ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ ಫೈನಲ್ – ಬಿಜೆಪಿ 17, ಜೆಡಿಯು 16 ಕ್ಷೇತ್ರಗಳಲ್ಲಿ ಸ್ಪರ್ಧೆ ಖಚಿತ
ಟಿಕೆಟ್ ಸಿಕ್ಕಮೇಲೆ ಯದುವೀರ್ ಹೇಳಿದ್ದೇನು?
ಸಮಸ್ತ ಮೈಸೂರು-ಕೊಡಗು ಪ್ರಜಾಬಾಂಧವರಿಗೆ ನನ್ನ ನಮಸ್ಕಾರ, ನಿಮ್ಮೆಲ್ಲರಿಗೂ ಈಗಾಗಲೇ ತಿಳಿದಿರುವಂತೆ, ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಭಾರತೀಯ ಜನತಾ ಪಕ್ಷದಿಂದ ಅವಕಾಶ ನೀಡಲಾಗಿದೆ. ನಮ್ಮ ಪೂರ್ವಜರ ಮಹತ್ತರ ಕೊಡುಗೆಗಳಿಂದ ಕರ್ನಾಟಕ ಜನತೆಯ ಬೆಂಬಲ ಮತ್ತು ಭಾವನಾತ್ಮಕ ಸಂಪರ್ಕವು ನಿಸ್ಸಂದೇಹವಾಗಿ ನಮ್ಮೊಟ್ಟಿಗಿದೆ. ಕಳೆದ ಒಂಭತ್ತು ವರ್ಷಗಳಿಂದ ನಾನು ನಮ್ಮ ಕ್ಷೇತ್ರದ ಹಾಗು ನಮ್ಮ ರಾಜ್ಯದ ಸಾರ್ವಜನಿಕ ಜೀವನದ ಭಾಗವಾಗಿದ್ದು ಅನೇಕ ಪ್ರಜಾಬಾಂಧವರನ್ನು ಭೇಟಿಮಾಡುವ ಅವಕಾಶ ಸಿಕ್ಕಿದ್ದು, ನನ್ನನ್ನು ನೀವೆಲ್ಲರೂ ಮುಕ್ತವಾಗಿ ಒಬ್ಬ ಸ್ನೇಹಿತನಂತೆ ಸ್ವಾಗತಿಸಿ ಆತಿಥ್ಯವನ್ನು ನೀಡಿದ್ದೀರಿ, ಈಗ ಆ ಋಣವನ್ನು ತೀರಿಸಲು ಅವಕಾಶ ಕೇಳುತ್ತಿದ್ದೇನೆ.
ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದದಿಂದ ಮೈಸೂರು ಮತ್ತು ಕೊಡಗಿನ ಸರ್ವಾಂಗೀಣ ಏಳಿಗೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಲು ನಾನು ಆಶಿಸುತ್ತಿದ್ದೇನೆ. ಮೈಸೂರು-ಕೊಡಗಿನ ಜನರ ಶುಭ ಹಾರೈಕೆ ಮತ್ತು ಬೆಂಬಲವನ್ನು ಎದುರು ನೋಡುತ್ತಿದ್ದೇನೆ. ಚುನಾವಣೆಯಲ್ಲಿ ಪಕ್ಷವನ್ನು ಪ್ರತಿನಿಧಿಸಲು ನನ್ನ ಮೇಲೆ ನಂಬಿಕೆ ಇಟ್ಟಿರುವ ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರಿಗೂ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರಿಗೂ, ಗೃಹಮಂತ್ರಿಗಳಾದ ಅಮಿತ್ ಶಾ ಅವರಿಗೂ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಬಿ.ಎಲ್ ಸಂತೋಷ್, ರಾಜ್ಯ ಅಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರಿಗೂ ಹಾಗೂ ವಿಶೇಷವಾಗಿ ಬಿಜೆಪಿ ಪಕ್ಷದ ಆತ್ಮ ಜೀವವಾಗಿರುವ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಎರಡು ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ನಾನು ಪ್ರತಾಪ್ ಸಿಂಹ ಅವರನ್ನು ಅಭಿನಂದಿಸುತ್ತೇನೆ. ಈ ಕ್ಷೇತ್ರದ ಅಭಿವೃದ್ಧಿಗೆ ಅವರ ಬದ್ಧತೆ ನಮ್ಮೆಲ್ಲರ ಭವಿಷ್ಯದ ಆಕಾಂಕ್ಷಿಗಳಿಗೆ ಭದ್ರ ಅಡಿಪಾಯ ಹಾಕಿ ಕೊಟ್ಟಿದೆ. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯ ಆಶಿರ್ವಾದಾನುಗ್ರಹಗಳು ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೆನೆ ಎಂದು ಫೇಸ್‌ಬುಕ್ ಪುಟದಲ್ಲಿ ತಿಳಿಸಿದ್ದರು.
– ಮೋಹನ ಬಿ.ಎಂ