ಬೆಂಗಳೂರು: ಕೃಷಿ ಕಾಯಕದ ಮೂಲಕ ಸ್ವಾವಲಂಬಿ, ಕರಾವಳಿ ಭಾಗದ ಭಗೀರಥ ಎಂದೇ ಗುರುತಿಸಿಕೊಂಡ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ಮಹಾಲಿಂಗ ನಾಯ್ಕ (76) ಅವರು ಕೃಷಿ ಕ್ಷೇತ್ರದ ಸಾಧನೆಗಾಗಿ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಸಾಧನೆಯ ಹಿಂದೆನ ಕಥೆ ರೋಚಕವಾಗಿದೆ.
ಮಹಾಲಿಂಗ ನಾಯ್ಕ ಕೃಷಿಯೇ ಬದುಕಿಗೆ ಮೂಲಾಧಾರವೆಂಬ ಕಲ್ಪನೆಯನ್ನು ಬಿತ್ತುತ್ತಿರುವ ಸಾಧಕ. ಕೃಷಿ ಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ, ಆಧುನಿಕ ತಲೆಮಾರಿಗೆ ತೋರಿಸಿಕೊಟ್ಟವರು. ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಬಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್ ರಹಿತವಾಗಿ ಗುರುತ್ವಾಕರ್ಷಣೆಯ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಹನಿ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
ಸಾಧನೆಯ ಹಿನ್ನೆಲೆ: ಅಡಿಕೆ, ತೆಂಗಿನ ಮರ ಏರುವುದರಲ್ಲಿ ಪರಿಣತಿ ಹೊಂದಿದ್ದ ಕೃಷಿ ಕೂಲಿ ಕಾರ್ಮಿಕರಾಗಿದ್ದ ಮಹಾಲಿಂಗ ನಾಯ್ಕ 40 ವರ್ಷಗಳ ಹಿಂದೆ ಕೃಷಿಕರ ತೋಟಗಳಲ್ಲಿ ದುಡಿಯುವಾಗ ಸ್ವಂತ ತೋಟ ಮಾಡುವ ಸ್ವಾವಲಂಬಿ ಜೀವನದ ಕನಸು ಕಂಡಿದ್ದರು. ಅವರಲ್ಲಿ ಜಮೀನು ಇರಲಿಲ್ಲ. ಭೂಮಾಲೀಕ ಅಮೈ ಮಹಾಬಲ ಭಟ್ಟರ ತೋಟಕ್ಕೆ ದಿನಾ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ಆದಾಯದಲ್ಲಿ ಅವರ ಸಂಸಾರದ ರಥ ಸಾಗುತ್ತಿತ್ತು. ಒಂದು ದಿನ ಮಹಾಬಲ ಭಟ್ ಅವರು ಮಹಾಲಿಂಗ ನಾಯ್ಕರಿಗೆ ಎರಡು ಎಕರೆ ಜಮೀನು ನೀಡಲು ಒಪ್ಪಿಕೊಂಡರು. 1978ರಲ್ಲಿ ಮಹಾಬಲ ಭಟ್ಟರ ಬೆಂಬಲದಿಂದಾಗಿ ಎರಡು ಎಕರೆ ಗುಡ್ಡ ದರ್ಖಾಸ್ತು ರೂಪದಲ್ಲಿ ಮಹಾಲಿಂಗ ನಾಯ್ಕರಿಗೆ ನೀಡಲಾಗಿತ್ತು.
Advertisement
ಸುರಂಗ ಕೊರೆದ ಕಥೆ: ಮನೆ ಕಟ್ಟಲು ಅಸಾಧ್ಯವಾದ, ನೀರಿಲ್ಲದ ಇಳಿಜಾರು ಬೋಳು ಗುಡ್ಡದಲ್ಲಿ ಕೃಷಿ ತೋಟ ಮಾಡುವುದು ಮಹಾಲಿಂಗ ನಾಯ್ಕರಿಗೆ ಸವಾಲಾಗಿತ್ತು. ಆದರೂ ಇವರ ಪ್ರಯತ್ನ ಬಿಟ್ಟಿರಲಿಲ್ಲ. ಕುಡಿಯುವ ನೀರಿಗಾಗಿ ಪಕ್ಕದ ಮನೆಯವರನ್ನು ಆಶ್ರಯಿಸಿದ್ದ ಮಹಾಲಿಂಗ ನಾಯ್ಕರಿಗೆ ಬಾವಿ ತೋಡಿಸಲು ಕೈಯಲ್ಲಿ ದುಡ್ಡಿರಲಿಲ್ಲ. ಬಾವಿ ತೋಡಿದರೆ ನೀರು ದೊರೆಯುವ ಸಾಧ್ಯತೆ ಕಡಿಮೆ ಇತ್ತು. ಏಕಾಂಗಿಯಾಗಿ ಬಾವಿ ತೋಡುವುದು ಅಸಾಧ್ಯ ಮಾತು. ಆಗ ಅವರಿಗೆ ಹೊಳೆದದು ಸುರಂಗ ಕೊರೆತ. ಅರ್ಧ ದಿನ ಕೂಲಿ ಕೆಲಸ, ಉಳಿದರ್ಧ ದಿನ ಮತ್ತು ರಾತ್ರಿ ಹೊತ್ತು ಸುರಂಗ ಕೊರೆಯುವ ಮೂಲಕ ಜೀವಜಲ ಹುಡುಕುವ ಪ್ರಯತ್ನವನ್ನು ಮಾಡಲು ಮಂದಾಗಿದ್ದರು. ಇದನ್ನೂ ಓದಿ: ಸಾಲ ವಸೂಲಿಯಲ್ಲೂ ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಎಎಪಿ ಆರೋಪ
Advertisement
30 ಮೀ. ಉದ್ದದ ಸುರಂಗ ಕೊರೆದರೂ ನೀರು ಸಿಗಲಿಲ್ಲ. ಇದರಿಂದ ನಿರಾಸೆಯಾಗದ ಅವರು ಪ್ರಯತ್ನ ಮುಂದುವರಿಸಿ ಸೀಮೆಎಣ್ಣೆ , ತೆಂಗಿನೆಣ್ಣೆ ದೀಪದ ಬೆಳಕಿನಲ್ಲಿ ಪ್ರತಿ ವರ್ಷ ತಲಾ ಒಂದರಂತೆ 25-30 ಮೀಟರ್ ಉದ್ದದ ಸತತ ಐದು ಸುರಂಗಗಳನ್ನು ಕೊರೆದರು. ಪ್ರಯತ್ನಕ್ಕೆ ಫಲ ದೊರೆಯಲಿಲ್ಲ. ಅವರ ಪ್ರಯತ್ನವನ್ನು ನೋಡಿ ಹಲವರು ಗೇಲಿ ಮಾಡಿದ್ದರು. ಮಹಾಲಿಂಗ ನಾಯ್ಕರಿಗೆ ಆರನೇ ಪ್ರಯತ್ನ ಫಲ ನೀಡಿತು.ಇದೀಗ ಕೇಂದ್ರ ಸರ್ಕಾರ ಇವರ ಸಾಧನೆಗೆ ಮೆಚ್ಚಿ 2022ನೇ ಸಾಲಿನ ಪದ್ಮಶ್ರೀ ಪ್ರಶಶ್ತಿಯನ್ನು ನೀಡಿ ಗೌರವಿಸುತ್ತಿದೆ. ಇದನ್ನೂ ಓದಿ: ಬಿಪಿನ್ ರಾವತ್ಗೆ ಪದ್ಮವಿಭೂಷಣ – ರಾಜ್ಯದ ಐವರಿಗೆ ಪದ್ಮಶ್ರೀ
ಆರನೇ ಸುರಂಗದ ಪಕ್ಕದಲ್ಲಿ ಇನ್ನೊಂದು ಸುರಂಗ ಕೊರೆದರು. 25 ಮೀ. ತಲುಪುವಾಗ ನೀರು ಕಾಣಿಸಿಕೊಂಡಿತು. ಮತ್ತೆ ಮುಂದುವರಿಸಿ 75 ಮೀ. ಉದ್ದದ ಸುರಂಗವಾಗುವ ಹೊತ್ತಿಗೆ ಯೆಥೇಚ್ಛ ನೀರು ಸಿಕ್ಕಿತು. ಆಗ ಅವರ ತೋಟದ ಕನಸು ಮತ್ತೆ ಗರಿಗೆದರಿತು. ಸುರಂಗದ ನೀರನ್ನು ಸಂಗ್ರಹಿಸಲು ಮಣ್ಣಿನ ಟ್ಯಾಂಕ್ ನಿರ್ಮಿಸಿದರು. ನೀರಿನ ಸಂಪನ್ನತೆಯಿಂದಾಗಿ ತೋಟ ಮಾಡುವ ಕನಸು ನನಸಾಯಿತು. ಗುಡ್ಡವನ್ನು ಸಮತಟ್ಟು ಮಾಡಿ ಭತ್ತ, ಅಡಕೆ, ತೆಂಗು, ಬಾಳೆ ಕೃಷಿ ಕೈಗೊಂಡರು. ಮಡದಿ ಲಲಿತ ಮೂವರು ಮಕ್ಕಳು ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.