– ಆಣೆ ಪ್ರಮಾಣದಿಂದ ಹಿಂದಕ್ಕೆ ಸರಿದ ಇತ್ತಂಡಗಳು
ಉಡುಪಿ: ಇಲ್ಲಿನ ಮಹಾಲಕ್ಷ್ಮಿ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನ (Mahalakshmi Co Operative Bank) ಕೋಟ್ಯಂತರ ರೂಪಾಯಿ ಆರ್ಥಿಕ ಅವ್ಯವಹಾರ ವಿಚಾರ ದೇವಸ್ಥಾನದ ಮೆಟ್ಟಿಲು ಹತ್ತಿದೆ. ಸಾಲ ತೆಗೆದುಕೊಂಡು ಗ್ರಾಹಕರು ಮರುಪಾವತಿ ಮಾಡುತ್ತಿಲ್ಲ ಎಂದು ಬ್ಯಾಂಕ್‌ನವರು ಹೇಳಿದ್ರೆ. ನಮಗೆ ಹಣ ಸಿಕ್ಕಿಲ್ಲ ಅನ್ಯಾಯವಾಗಿದೆ ಅನ್ನೋದು ಗ್ರಾಹಕರ ಅಳಲು. ಈ ಸಂಬಂಧ ಬ್ಯಾಂಕ್ ಪರವಾಗಿ ಬ್ಯಾಂಕ್ ಅಧ್ಯಕ್ಷ & ಬಿಜೆಪಿ ಹಾಲಿ ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna) ನಿಂತರೆ.. ಗ್ರಾಹಕರ ಪರವಾಗಿ ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್ (Raghupati Bhat) ದನಿ ಎತ್ತಿದ್ದಾರೆ.
ಬ್ಯಾಂಕಿನ ಎಂ.ಡಿ ಸಿಬ್ಬಂದಿ, ಮೋಸ ಆಗಿದೆ ಎನ್ನುತ್ತಿರುವ ಗ್ರಾಹಕರು ದೇವಸ್ಥಾನದಲ್ಲಿ ಮುಖಾಮುಖಿಯಾದರು. ಸ್ವಾಮೀಜಿಗಳ, ಜಾತಿ ಮುಖಂಡರ ಮಧ್ಯಪ್ರವೇಶದಿಂದ ಆಣೆ ಪ್ರಮಾಣಕ್ಕೆ ಬ್ರೇಕ್ ಬಿತ್ತು. ಕಾನೂನು ರೀತಿಯ ಹೋರಾಟದ ತೀರ್ಮಾನ ಮಾಡಲಾಯಿತು. ಉಡುಪಿಯ ಮಹಾಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನ ಸಾಲ ಮತ್ತು ಮರುಪಾವತಿ ವಿಚಾರದಲ್ಲಿ ಕಳೆದ ಒಂದು ವಾರದಿಂದ ಭಾರಿ ಚರ್ಚೆ ನಡೆಯುತ್ತಿದೆ. ಸಾಲ ತೆಗೆದುಕೊಂಡು ಗ್ರಾಹಕರು ಮರುಪಾವತಿ ಮಾಡುತ್ತಿಲ್ಲ ಎಂಬುದು ಬ್ಯಾಂಕ್ ನ ವಾದ. ನಮಗೆ ಹಣ ಸಿಕ್ಕಿಲ್ಲ ಅನ್ಯಾಯವಾಗಿದೆ ಎಂಬುದು ಗ್ರಾಹಕರ ಆಳಲು.
ಈ ನಡುವೆ ಮಧ್ಯವರ್ತಿಗಳು ಮಾಡಿದ್ದಾರೆ ಎನ್ನಲಾದ ಕೋಟ್ಯಾಂತರ ರೂಪಾಯಿ ಅವ್ಯವಹಾರ, ಗ್ರಾಹಕರು ಮತ್ತು ಬ್ಯಾಂಕ್ ನಡುವಿನ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದೆ. ಮಾಜಿ ಶಾಸಕ ರಘುಪತಿ ಭಟ್ ಗ್ರಾಹಕರ ಪರವಾಗಿ ಧ್ವನಿಯೆತ್ತುತ್ತಿದ್ದಂತೆ ಬ್ಯಾಂಕ್ ಆಣೆ ಪ್ರಮಾಣದ ಸವಾಲು ಹಾಕಿತ್ತು. ಹಾಲಿ ಶಾಸಕ ಯಶ್ ಪಾಲ್ ಸುವರ್ಣ ನಡುವೆ ಜಟಾಪಟಿ ಆರಂಭವಾಗಿತ್ತು. ಈ ಮಾತುಕತೆಯಂತೆ ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಬ್ಯಾಂಕಿನ ಜಿಎಂ, ಸಿಬ್ಬಂದಿ ಆಗಮಿಸಿದ್ದರು. ಅನ್ಯಾಯವಾಗಿದೆ ಎನ್ನುವ ಗ್ರಾಹಕರು ದೇವರ ಮುಂದೆ ಅಳಲನ್ನು ತೋಡಿಕೊಂಡರು.
ಬ್ಯಾಂಕ್‌ನ ಎಂಡಿ ದೇವರಿಗೆ ಕಾಣಿಕೆ ಅರ್ಪಿಸಿ ವಿಶೇಷ ಪೂಜೆ ನೆರವೇರಿಸಿದರು. ಕಾನೂನು ಹೋರಾಟದ ಮೊರೆ ಹೋಗುವುದಾಗಿ ಹೇಳಿದರು. ಆಣೆ ಪ್ರಮಾಣ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದ ಪ್ರಧಾನ ಅರ್ಚಕರು ದೂರನ್ನು ದೇವರ ಮುಂದೆ ಇಡೀ ನ್ಯಾಯಕ್ಕಾಗಿ ಪ್ರಾರ್ಥನೆ ಮಾಡಿ ಎಂಬ ಸಲಹೆ ನೀಡಿದರು.
ಬ್ಯಾಂಕ್ ವಿಚಾರದ ಚರ್ಚೆ ತಾರಕಕ್ಕೆ ಹೋಗುತ್ತಿದ್ದಂತೆ ಸ್ವಾಮೀಜಿಗಳಿಬ್ಬರು ಅಭಿಪ್ರಾಯ ಮಂಡಿಸಿದ್ದಾರೆ ಉಡುಪಿಯ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿ ಬ್ಯಾಂಕ್ ಮತ್ತು ಗ್ರಾಹಕರ ನಾಯಕರುಗಳಿಗೆ ಕರೆ ಮಾಡಿ ಕಾನೂನು ರೀತಿಯಲ್ಲಿ ಹೋರಾಟ ಮಾಡಿ ದೈವ ದೇವರನ್ನು ನಡುವೆ ತರಬೇಡಿ ಎಂಬ ಸೂಚನೆಯನ್ನು ನೀಡಿದ್ದಾರೆ. ಇದನ್ನು ಒಪ್ಪಿದ ಗ್ರಾಹಕರು ಮತ್ತು ಬ್ಯಾಂಕ್.. ಆಣೆ ಪ್ರಮಾಣ ಮಾಡದೇ ಪೂಜೆಗೆ ಸೀಮಿತಗೊಳಿಸಿದೆ. ಸಂಕಷ್ಟದಲ್ಲಿರುವ ಗ್ರಾಹಕರಿಗೆ ಸಹಾಯ ಮಾಡುವುದಾಗಿ ರಘುಪತಿ ಭಟ್ ಹೇಳಿದ್ದಾರೆ.
ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದಂತೆ ಮಹಾಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಪತ್ರಿಕಾಗೋಷ್ಠಿ ನಡೆಸಿದೆ. ಆರ್‌ಬಿಐ ಚೌಕಟ್ಟಿನ ಮೂಲಕ ಮಹಾಲಕ್ಷ್ಮಿ ಕೋ ಬ್ಯಾಂಕ್ ಕೆಲಸ ಮಾಡುತ್ತಿದೆ. ಆರ್ಥಿಕ ಶಿಸ್ತು ಇದೆ ಯಾವುದೇ ತನಿಖೆಗೆ ಬ್ಯಾಂಕ್, ನಾವು ಸಿದ್ಧವಿದೆ ಎಂದಿದೆ. ಈ ನಡುವೆ ಮಾಜಿ ಶಾಸಕ ರಘುಪತಿ ಭಟ್ ವಿರುದ್ಧ ಹರಿಹಾಯ್ದ ಶಾಸಕ ಯಶ್ ಪಾಲ್ ಸುವರ್ಣ, ರಘುಪತಿ ಭಟ್ ಬ್ಯಾಂಕ್‌ನ ಹಕರು, ನ್ಯಾಯಾಧೀಶರಲ್ಲ ಎಂದಿದ್ದಾರೆ. ಆಧಾರ ರಹಿತ ಹೇಳಿಕೆ ಆರೋಪಕ್ಕೆ ವಾರದೊಳಗೆ ಸ್ಪಷ್ಟನೆ ನೀಡಬೇಕು, ಇಲ್ಲದಿದ್ದಲ್ಲಿ ಸದಸ್ಯತನ ರದ್ಧು ಮಾಡುತ್ತೇವೆ ಎಂದು ತಾಕೀತು ಮಾಡಿದ್ದಾರೆ. ಕೋರ್ಟ್ ನಲ್ಲಿ ಅವರು ತಪ್ಪಿತಸ್ಥರು ಅಂತ ಸಾಭೀತಾದರೆ ರಘುಪತಿ ಭಟ್ ಸಾಲದ ಜವಾಬ್ದಾರಿ ತೆಗೆದುಕೊಳ್ತಾರಾ? ಎಂದು ಸವಾಲು ಹಾಕಿದ್ದಾರೆ.
ಬ್ಯಾಂಕಿನಲ್ಲಿ ಆದ ವ್ಯವಹಾರ ಅವ್ಯವಹಾರ ದೇವಸ್ಥಾನದ ವರೆಗೆ ಹೋಗಿದ್ದು ಎಷ್ಟು ಸರಿ? ಆಣೆ ಪ್ರಮಾಣದವರೆಗೆ ತಲುಪಿದ್ದು ಸರಿಯಲ್ಲ ಎಂಬುದು ಭಕ್ತರ,ಜನರ ಅಭಿಪ್ರಾಯ. ಕಾನೂನು ರೀತಿಯ ಹೋರಾಟ ಮುಂದುವರೆಯುತ್ತೋ? ಮಾತುಕತೆಯ ಮೂಲಕ ಪರಿಹಾರವಾಗುತ್ತೋ ನೋಡಬೇಕು.