ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಜನ ಸಾಮಾನ್ಯರ ಮಧ್ಯದಲ್ಲಿಯೇ ನೂತನ ಜನ ಸಾಮಾನ್ಯರ ಪಕ್ಷಕ್ಕೆ ಚಾಲನೆ ನೀಡಲಾಯಿತು. ಡಾ. ಅಯ್ಯಪ್ಪ ನೇತೃತ್ವದಲ್ಲಿ ಮುನ್ನಡೆಯುತ್ತಿರೋ ಪಕ್ಷಕ್ಕೆ ರೈತ ಮಹಿಳೆ ನಿಂಬೆವ್ವ ದೊರೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ಜನ ಸಾಮಾನ್ಯರ ಪಕ್ಷವನ್ನ ಬೆಂಬಲಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ 30 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು. ಸಮಾರಂಭದಲ್ಲಿ ಹಿರಿಯ ಸಾಹಿತಿ ಚಂಪಾ, ಮಹಾದಾಯಿ ಹೋರಾಟಗಾರ ವಿಜಯ್ ಕುಲಕರ್ಣಿ ಸೇರಿದಂತೆ ಮಹದಾಯಿ ಹೋರಾಟಗಾರರು ಹಾಗೂ ಬಹುತೇಕ ರೈತಪರ ಸಂಘಟನೆಗಳು ಪಕ್ಷ ಸ್ಥಾಪನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Advertisement
Advertisement
ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಹದಾಯಿ ಹೋರಾಟಗಾರ ವಿಜಯ್ ಕುಲಕರ್ಣಿ ಅವರು, ರೈತರಿಗಾಗಿ, ಮಹದಾಯಿಗಾಗಿ ಯಾರು ನಮ್ಮ ಬೆಂಬಲಕ್ಕೆ ನಿಲ್ಲುತ್ತಾರೋ ಆ ಪಕ್ಷಕ್ಕೆ ನನ್ನನ್ನು ನಾನು ಅರ್ಪಿಸಿಕೊಳ್ಳುತ್ತೇನೆ. ಸರ್ಕಾರದ ದುಡ್ಡಿನ ಸಹಾಯವಿಲ್ಲದೇ ರೈತರೇ ದುಡ್ಡು ಹಾಕಿ ಕಾಲುವೆ ನಿರ್ಮಿಸಿ ರಾಜ್ಯಕ್ಕೆ ನೀರು ತರುತ್ತೇವೆ. ನಮ್ಮ ಹೋರಾಟಕ್ಕೆ ಆರ್ಥಿಕ ಸಹಾಯ ಮಾಡಲು ನೂತನ ಜನ ಸಾಮಾನ್ಯರ ಪಕ್ಷ ಮುಂದೆ ಬಂದಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಪ್ರಮುಖ ಪಕ್ಷಗಳಿಗೆ ಎಚ್ಚರಿಕೆ ನೀಡುತ್ತೇನೆ ಎಂದರು.
Advertisement
ಜನ ಸಾಮಾನ್ಯ ಪಕ್ಷದ ಅಧ್ಯಕ್ಷ ಡಾ. ಅಯ್ಯಪ್ಪ ಅವರು ಮಾತನಾಡಿ, ದಿನಕ್ಕೆ ಐದು ತರಹ ಡ್ರೆಸ್ ಹಾಕುವ ಪ್ರಧಾನಿ ರೈತರ ಕೈ ಹಿಡಿಯುವುದಿಲ್ಲ. ಪ್ರಧಾನಿ ಮೋದಿ ಭಾಷಣ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಬರೀ ಯುದ್ಧದ ಬಗ್ಗೆ ಮಾತನಾಡುತ್ತಾರೆ. ನಿಮಗೆ ಅನ್ನ ಬೇಕಾ, ಯುದ್ಧ ಬೇಕಾ ಎಂದು ಜನರಿಗೆ ಪ್ರಶ್ನಿಸಿದರು.
Advertisement
ಈ ವೇಳೆ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜನ ಸಾಮಾನ್ಯರ ಪಕ್ಷದಿಂದ 20 ಕೋಟಿ ರೂ. ಖರ್ಚು ಮಾಡಲು ಸಿದ್ಧರಿದ್ದು, ಶ್ರಮದಾನದ ಮೂಲಕ ಕೆಲಸ ಮಾಡುತ್ತೇವೆ. ಕಳಸಾ ಬಂಡೂರಿ ನಾಲಾ ಕಾಮಗಾರಿಗೆ ಅನುಮತಿ ಕೊಡಿ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣ ಮಾಡಿ ಮುಗಿಸುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಎಸೆದರು.
ಆರ್ ಎಸ್‍ಎಸ್ ಒಂದು ನಿರುದ್ಯೋಗಿಗಳ ಸಂಘ. ಪ್ರಧಾನಿ ಮೋದಿ ನಿರುದ್ಯೋಗಿಗಳ ಸಂಘದ ಸದಸ್ಯ. ಪ್ರಧಾನಿ ಮೋದಿ ಅವರು ಬರೀ ಯಾವ ರೀತಿ ಭಾಷಣ ಮಾಡಬೇಕು ಎಂದು ಯೋಚಿಸುತ್ತಾರೆ. ಈ ಮೂಲಕ ಭಾಷಣ ಮಾಡಿ ಜನರ ದಿಕ್ಕು ತಪ್ಪಿಸುತ್ತಾರೆ. ರಾಜ್ಯ ಮತ್ತು ಕೇಂದ್ರ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿವೆ. ಶೀಘ್ರದಲ್ಲೇ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.