ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಜಲ ವಿವಾದಗಳನ್ನು ನಿಭಾಯಿಸುವ ಜವಾಬ್ದಾರಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ನೀಡಿದ್ರಾ? ಇಂಥದ್ದೊಂದು ಪ್ರಶ್ನೆ ಈಗ ಸರ್ಕಾರದ ಮಟ್ಟದಲ್ಲಿ ಎದ್ದಿದೆ.
ಮಹದಾಯಿ ಕುರಿತ ನ್ಯಾಯಾಧೀಕರಣದ ತೀರ್ಪಿನ ಮೇಲೆ ಕೇಂದ್ರ ಸರ್ಕಾರ ಇನ್ನೂ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ. ಈ ಕುರಿತು ಸಿಎಂ ಯಡಿಯೂರಪ್ಪ ಅವರು ಇಂದು ತಮ್ಮ ಧವಳಗಿರಿ ನಿವಾಸದಲ್ಲಿ ನಡೆಸಿದ ಸಭೆಯೇ ಈ ಪ್ರಶ್ನೆ ಎದ್ದೇಳಲು ಕಾರಣವಾಗಿದೆ. ಇಷ್ಟು ದಿನ ಜಲಸಂಪನ್ಮೂಲ ಇಲಾಖೆಗೆ ಪ್ರತ್ಯೇಕ ಸಚಿವರು ಇರಲಿಲ್ಲ. ಆದರೆ ಈಗ ಗೋಕಾಕ್ ಶಾಸಕರಾಗಿರುವ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಇಲಾಖೆಯನ್ನು ಅಧಿಕೃತವಾಗಿ ವಹಿಸಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಇಲಾಖೆಯ ಹೊಣೆ ಹೊತ್ತುಕೊಂಡ ಬಳಿಕ ಮಹದಾಯಿ ತೀರ್ಪಿನ ಕುರಿತು ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಕಳೆದ ಗುರುವಾರ ಸುಪ್ರೀಂಕೋರ್ಟ್ ನಿಂದ ಈ ಕುರಿತು ಮಧ್ಯಂತರ ಆದೇಶ ಬಂದ ಹಿನ್ನೆಲೆಯಲ್ಲಿ ಇವತ್ತು ಸಿಎಂ ಸಭೆ ನಡೆಸಿದರು. ಸಭೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್ ಹಾಗೂ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಉಪಸ್ಥಿತರಿದ್ದರು. ಆದರೆ ಬೆಳಗಾವಿಯಲ್ಲಿರುವ ಜಲಸಂಪನ್ಮೂಲ ಇಲಾಖೆ ಸಚಿವ ರಮೇಶ್ ಜಾರಕಿಹೊಳಿ ಸಭೆಗೆ ಆಗಮಿಸಿರಲಿಲ್ಲ.
ಹಾಲಿ ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿ ಬದಲು ಗೃಹ ಸಚಿವ ಬೊಮ್ಮಾಯಿ ಜೊತೆ ಮಹದಾಯಿ ವಿಚಾರವನ್ನು ಸಿಎಂ ಯಡಿಯೂರಪ್ಪ ಚರ್ಚೆ ನಡೆಸಿರುವುದು ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಮಹದಾಯಿ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಅವಗಿಂತಲೂ ಬಸವರಾಜ್ ಬೊಮ್ಮಾಯಿ ಅವರಿಗೆ ಹೆಚ್ಚು ಆದ್ಯತೆ ಕೊಟ್ರಾ ಸಿಎಂ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಸಿಎಂ ಯಡಿಯೂರಪ್ಪ ಅವರು ಕೆಲ ತಿಂಗಳ ಹಿಂದೆಯೂ ಮಹಾರಾಷ್ಟ್ರಕ್ಕೆ ಹೋಗಿದ್ದಾಗಲೂ ಬಸವರಾಜ್ ಬೊಮ್ಮಾಯಿ ಅವರನ್ನು ಜೊತೆಯಲ್ಲೇ ಕರೆದುಕೊಂಡು ಹೋಗಿದ್ದರು. ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿದ್ದಾಗಲೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಿಎಂ ಜತೆಯೆ ಇದ್ದರು. ಆ ನಂತರ ಮಹದಾಯಿ ಕುರಿತು ಏನೇ ಸಮಸ್ಯೆಗಳು ಉಂಟಾದಾಗ ಅದನ್ನು ಬೊಮ್ಮಾಯಿ ಮಾಡುತ್ತಾರೆ ಎಂದು ಸಿಎಂ ಯಡಿಯೂರಪ್ಪ ಹೇಳುತ್ತಿದ್ದರು. ಇದೀಗ ಕೇಂದ್ರದ ಗೆಜೆಟ್ ನೊಟಿಫಿಕೇಶನ್ ಹೊರಡಿಸುವ ಬಗ್ಗೆಯೂ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಸಿಎಂ ಚರ್ಚಿಸಿದ್ದಾರೆ. ಹೀಗಾಗಿ ಜಲವಿವಾದಗಳನ್ನು ನಿಭಾಯಿಸಲು ನೀರಾವರಿ ಕ್ಷೇತ್ರದ ಆಳ-ಅಗಲಗಳನ್ನು ಅರ್ಥ ಮಾಡಿಕೊಂಡಿರುವ, ಜಲ ವಿವಾದಗಳ ಕುರಿತು ಪರಿಣಿತರಾಗಿರುವ ಬಸವರಾಜ್ ಬೊಮ್ಮಾಯಿ ಅವರೇ ಸೂಕ್ತ ಅನ್ನುವ ತೀರ್ಮಾನಕ್ಕೆ ಸಿಎಂ ಯಡಿಯೂರಪ್ಪ ಬಂದ್ರಾ ಎನ್ನುವ ಪ್ರಶ್ನೆ ಎದ್ದಿದೆ.
ಸಭೆಯಲ್ಲಿ ಏನು ಚರ್ಚೆಯಾಯ್ತು?
ಮಹದಾಯಿ ನೀರು ಹಂಚಿಕೆ ಬಗ್ಗೆ ಕೇಂದ್ರದಿಂದ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ವಿಚಾರವಾಗಿ ಸಿಎಂ ಸಭೆಯಲ್ಲಿ ಚರ್ಚಿಸಲಾಯ್ತು. ಕಳೆದ ವಾರ ಕೇಂದ್ರದ ಗೆಜೆಟ್ ನೋಟಿಫಿಕೇಷನ್‍ಗೆ ಸುಪ್ರೀಂಕೋರ್ಟ್ ಸಮ್ಮತ ಕೊಟ್ಟಿತ್ತು. ಆದರೆ ಈ ನಿಟ್ಟಿನಲ್ಲಿ ಕೇಂದ್ರದಿಂದ ಪ್ರಕ್ರಿಯೆ ನಡೆಯುತ್ತಿರುವ ಸುಳಿವು ಇನ್ನೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಸಂಬಂಧ ಕೇಂದ್ರದ ಮೇಲೆ ಒತ್ತಾಯ ಹಾಕುವ ಬಗ್ಗೆ ಸಿಎಂ – ಬೊಮ್ಮಾಯಿ ಚರ್ಚೆ ನಡೆಸಿದರು ಎನ್ನಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು, ಸಾಧ್ಯವಾದರೆ ಮುಂದಿನ ವಾರ ದೆಹಲಿಗೆ ಒಂದು ನಿಯೋಗ ಕೊಂಡೊಯ್ದು ಕೇಂದ್ರದ ಜತೆ ಮಾತುಕತೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯ್ತು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.