ಬೆಂಗಳೂರು: ಮಹದಾಯಿ ಹೋರಾಟಕ್ಕಾಗಿ ಜನವರಿ 25 ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದ ಕನ್ನಡ ಪರ ಸಂಘಟನೆಗಳ ನಿರ್ಧಾರದ ಕುರಿತು ಸಂಘಟನೆಗಳಲ್ಲೇ ಒಮ್ಮತವಿಲ್ಲದೆ ಭಿನ್ನಮತ ಸ್ಫೋಟವಾಗಿದೆ.
ಕನ್ನಡ ಒಕ್ಕೂಟದ ಅಧ್ಯಕ್ಷರಾಗಿರುವ ವಾಟಾಳ್ ನಾಗರಾಜ್ ಬಂದ್ ಘೋಷಣೆ ಮಾಡಿದ್ದಾರೆ. ಆದರೆ ಈ ವೇಳೆ ಅವರು ಇತರೆ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
Advertisement
ಬಂದ್ ವಿಚಾರವಾಗಿ ವಾಟಾಳ್ ನಾಗರಾಜ್ ಬಣದ ಗಿರೀಶ್ ಮತ್ತು ನಾಗೇಶ್ ನಡುವಿನ ಫೋನ್ ಸಂಭಾಷಣೆ ವೈರಲ್ ಆಗಿದೆ. ಮಾತುಕತೆಯಲ್ಲಿ ಬಂದ್‍ಗೆ ಬೆಂಬಲ ನೀಡದ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಬಗ್ಗೆ ಗಿರೀಶ್ ಗೌಡ ಅವಾಚ್ಯವಾಗಿ ಮಾತನಾಡಿದ್ದಾರೆ. ಈ ವೇಳೆ ಮಹದಾಯಿ ಹೋರಾಟ ಬೇಕು, ಆದರೆ ಜನವರಿ 25 ರ ಬಂದ್ ಬೇಕಿಲ್ಲ. ಅದೇ ದಿನ ಸಾಂಕೇತಿಕ ಧರಣಿ ನಡೆಸಲು ಕರ್ನಾಟಕ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ ಎಂದು ನಾಗೇಶ್ ಹೇಳಿದ್ದಾರೆ.
Advertisement
Advertisement
ಈ ಕುರಿತು ಪಬ್ಲಿಕ್ ಟಿವಿಗೆ ದೂರವಾಣಿ ಮೂಲಕ ಸ್ಪಷ್ಟನೆ ನೀಡದ ಗಿರೀಶ್ ಗೌಡ ಅವರು, ಕನ್ನಡ ಸಂಘಟನೆಗಳ ಬಗ್ಗೆ ನಾಗೇಶ್ ಅವರಿಗೆ ಮಾಹಿತಿ ಇಲ್ಲ. ಬಂದ್ ಕುರಿತ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಹದಾಯಿ ಹೋರಾಟಗಾರರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಚರ್ಚೆ ನಡೆಸಿ ಪ್ರಧಾನಿ ಮೋದಿ ಅವರು ಕರ್ನಾಟಕ್ಕೆ ಆಗಮಿಸುವ ದಿನವೂ ಬೆಂಗಳೂರು ಬಂದ್ ಮಾಡಲು ಷರತ್ತು ಮುಂದಿಟ್ಟಿದ್ದರು. ಮಹದಾಯಿ ಹೋರಾಟಗಾರರ ಮಾತಿಗೆ ಬೆಲೆ ನೀಡಿ ಫೆಬ್ರವರಿ 4 ರಂದು ಬೆಂಗಳೂರು ಬಂದ್ ಮಾಡಿ ಹೋರಾಟ ಮಾಡಲು ಒಪ್ಪಿಗೆ ಸೂಚಿಸಿದ್ದೇವೆ ಎಂದರು.
Advertisement
ವಾಟಾಳ್ ನಾಗರಾಜ್ ಅವರು ಏಕಪಕ್ಷೀಯ ನಿರ್ಧಾರ ಮಾಡಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಗಿರೀಶ್ ಅವರು, ಕನ್ನಡ ನಾಡು- ನುಡಿ ವಿಷಯದ ಹೋರಾಟಕ್ಕೆ ಪ್ರತಿಯೊಬ್ಬ ಹೋರಾಟಗಾರರು ಕೈ ಜೋಡಿಸಬೇಕು. ಪ್ರತಿಯೊಬ್ಬರಿಗೂ ಪ್ರತಿ ಬಾರಿ ಹೋರಾಟ ಮಾಡುವ ವೇಳೆ ವಯಕ್ತಿಕವಾಗಿ ಆಹ್ವಾನ ನೀಡಲು ಸಾಧ್ಯವಿಲ್ಲ. ಕನ್ನಡ 2300 ಹೋರಾಟ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿವೆ. ಅಲ್ಲದೇ ಸರ್ಕಾರಿ ನೌಕಕರ ಸಂಘ, ವಕೀಲ ಸಂಘ ಬೆಂಬಲ ನೀಡಿದೆ ಎಂದರು.
ಕನ್ನಡ ಹೋರಾಟ ಸಂಘಟನೆಗಳಲ್ಲಿ ಯಾವುದೇ ರೀತಿಯ ಭಿನ್ನಮತವಿಲ್ಲ ಒಕ್ಕೂಟದ ನಿರ್ಧಾರದಂತೆ ಫೆಬ್ರವರಿ 4 ರಂದು ಬೆಂಗಳೂರು ಬಂದ್ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.
https://www.youtube.com/watch?v=zp0nzj9XDUU&feature=youtu.be