Connect with us

Bengaluru City

ಅಮಿತ್ ಶಾ ಮಧ್ಯಸ್ಥಿಕೆಯಲ್ಲಿ ಮಹದಾಯಿ ವಿವಾದ ಇತ್ಯರ್ಥ?

Published

on

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಮಹದಾಯಿ ಸಂಧಾನ ಸಭೆ ಬಹುತೇಕ ಯಶಸ್ವಿಯಾಗಿದ್ದು, ಗುರುವಾರ ಹುಬ್ಬಳ್ಳಿಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಅಧಿಕೃತವಾಗಿ ಬಿಜೆಪಿಯ ನಿರ್ಧಾರ ಪ್ರಕಟವಾಗಲಿದೆ.

ಅಮಿತ್ ಶಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಬಿಎಸ್ ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಕೇಂದ್ರ ಸಚಿವರಾದ ಅನಂತ್ ಕುಮಾರ್, ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಪ್ರಕಾಶ್ ಜಾವಡೇಕರ್, ಪಿಯೂಶ್ ಗೋಯಲ್, ಮುರಳೀಧರ್ ರಾವ್, ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್, ಸುರೇಶ್ ಅಂಗಡಿ ಭಾಗವಹಿಸಿದ್ದರು.

ಸುಮಾರು ಅರ್ಧಗಂಟೆಗಳ ಕಾಲ ನಡೆದ ಸಭೆಯಲ್ಲಿ ಮಹದಾಯಿ ವಿವಾದ ಕುರಿತಂತೆ ರಾಜ್ಯ ನಾಯಕರು ಗೋವಾ ಸಿಎಂ ಮನೋಹರ್ ಪರಿಕ್ಕರ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಚುನಾವಣಾ ದೃಷ್ಟಯಿಂದಲೂ ಈ ವಿವಾದ ಎಷ್ಟು ಮಹತ್ವದ್ದು ಎಂಬುದನ್ನು ಪರಿಕ್ಕರ್ ವಿವರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮಾತುಕತೆ ವೇಳೆ ಅಮಿತ್ ಶಾ ಕೂಡಾ ನೀರು ನೀಡುವಂತೆ ಪರಿಕ್ಕರ್ ಗೆ ಮನವೊಲಿಸುವ ಯತ್ನ ಮಾಡಿದರು ಎನ್ನಲಾಗಿದೆ.

ಮಾತುಕತೆ ಒಪ್ಪಿರುವ ಪರಿಕ್ಕರ್ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಗಳನ್ನು ನಾಳೆಯೊಳಗೆ ತಿಳಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ನಾಳೆ ಹುಬ್ಬಳ್ಳಿಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿಯಾಗಲಿರುವ ಪರಿವರ್ತನಾ ಯಾತ್ರೆಯಲ್ಲಿ ಅಧಿಕೃತ ಘೋಷಣೆ ಮಾಡಲು ತೀರ್ಮಾನಿಸಲಾಗಿದೆ.

ಈ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್‍ವೈ, ಇಂದು ನಡೆದ ಸಭೆ ಬಹುತೇಕ ಫಲಪ್ರದವಾಗಿದ್ದು, ಅಮಿತ್ ಶಾ ಸಂಧಾನಕ್ಕೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಕಳಸ ಬಂಡೂರಿ ವಿಚಾರದಲ್ಲಿ ಮಹತ್ವಪೂರ್ಣ ಮಾತುಕತೆ ನಡೆಸಿದ್ದೇವೆ. ಹಲವಾರು ವಿಷಯಗಳ ಬಗ್ಗೆ ಗೋವಾ ಸಿಎಂ ಜೊತೆ ಮುಕ್ತವಾಗಿ ಮಾತನಾಡಿದ್ದೇವೆ. ಮಹದಾಯಿ ನಿರ್ಣಯದ ಬಗ್ಗೆ ಹುಬ್ಬಳ್ಳಿ ಪರಿವರ್ತನಾ  ರ‍್ಯಾಲಿಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ ಎಂದು ತಿಳಿಸಿದರು.

ಸಭೆ ಒಳಗಿನ ಮಾಹಿತಿ ಬಹಿರಂಗ ಪಡಿಸದ ಯಡಿಯೂರಪ್ಪ ಕೇವಲ ಪರಿಕ್ಕರ್ ಸಕಾರಾತ್ಮಕ ವಾಗಿ ಸ್ಮಂದಿಸಿದ್ದಾರೆ ಎಂದು ಹೇಳಿದರು. ಒಟ್ಟಿನಲ್ಲಿ ಸಭೆಯ ಒಳಗಿನ ಗೌಪ್ಯತೆಯನ್ನು ಕಾಪಾಡಿಕೊಂಡಿರುವ ಬಿಜೆಪಿ ಗುರುವಾರ ಅಧಿಕೃತವಾಗಿ ತನ್ನ ನಿರ್ಧಾರವನ್ನು ಪರಿವರ್ತನಾ ಸಭೆಯಲ್ಲಿ ತಿಳಿಸಲಿದೆ.

https://www.youtube.com/watch?v=QDNG04rghcI

 

Click to comment

Leave a Reply

Your email address will not be published. Required fields are marked *