ಬೆಳಗಾವಿ: ಮಹದಾಯಿ ನ್ಯಾಯಾಧೀಕರಣದ ತೀರ್ಪಿನಂತೆ ಕೂಡಲೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬುಧವಾರ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಿದರು. ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಮಹದಾಯಿ ನ್ಯಾಯಾಧೀಕರಣಕ್ಕೆ ಸಂಬಂಧಿಸಿದಂತೆ ಐತೀರ್ಪು ಹೊರಬಿದ್ದಿದ್ದು, ಇದಕ್ಕೆ ಕೇಂದ್ರ ಸರಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕು. ಜನವರಿ ಎರಡರಂದು ಪ್ರಧಾನಿ ಮೋದಿ ತುಮಕೂರಿನಲ್ಲಿ ನಡೆಯುವ ರೈತ ಸಮಾವೇಶಕ್ಕೆ ಆಗಮಿಸುತ್ತಿದ್ದು, ಈ ಸಮಾವೇಶದಲ್ಲಿ ಮಹದಾಯಿ ಹೋರಾಟದ ಬಗ್ಗೆ ಮಾತನಾಡುತ್ತಾರೆಂಬ ಆಶಾಕಿರಣ ಇಟ್ಟುಕೊಂಡಿದ್ದೇವೆ. ಹೊಸ ವರ್ಷಕ್ಕೆ ಮೋದಿ ಹೊಸ ಸುದ್ದಿ ಕೊಡಬೇಕು. ಇನ್ನೂ ನ್ಯಾಯಾಧೀಕರಣ ತೀರ್ಪಿನಲ್ಲಿ ಕರ್ನಾಟಕಕ್ಕೆ ಕೇವಲ 13.5 ಟಿಎಂಸಿ ನೀರನ್ನು ಮಾತ್ರ ಹಂಚಿಕೆ ಮಾಡಿದ್ದು ಅನ್ಯಾಯ. ಅದ್ದರಿಂದ ಕೇಂದ್ರ ಸರ್ಕಾರವು ಸಂವಿಧಾನಿಕ ಹಕ್ಕಿನ ಮೂಲಕ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಜೆಡಿಎಸ್ ಮಾಜಿ ಶಾಸಕ ಎನ್.ಎಚ್ ಕೋನರಡ್ಡಿ ಮಾತನಾಡಿ, ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆಗಾಗಿ ನಿರಂತರ ಹೋರಾಟ ನಡೆಯುತ್ತಲೇ ಇದ್ದು ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ತೀರ್ಪು ನೀಡಿ ಒಂದು ವರ್ಷ ಕಳೆದರೂ ಕೇಂದ್ರ ಸರ್ಕಾರ ಅದಿಸೂಚನೆ ಹೊರಡಿಸುತ್ತಿಲ್ಲ. ಕೂಡಲೇ ಅಧಿಸೂಚನೆ ಹೊರಡಿಸಬೇಕು ಮತ್ತು ಹೋರಾಟದಲ್ಲಿ ರೈತರ ಮೇಲಾದ ಕೇಸುಗಳನ್ನು ಹಿಂತೆಗೆದುಕೊಳ್ಳಬೇಕೆಂದರು. ಜನೆವರಿ ಐದರಂದು ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಮಹದಾಯಿ ನದಿ ವ್ಯಾಪ್ತಿಗೆ ಬರುವ ಶಾಸಕರ ಮತ್ತು ಸಂಸದರು ಹಾಗೂ ಸಚಿವರುಗಳು ಸೇರಿ ಸಭೆ ಕರೆಯಲಾಗಿದ್ದು ಸಮಸ್ಯೆ ಕುರಿತು ಚರ್ಚಿಸಲಿದ್ದೇವೆ ಎಂದರು.
ಗಡಿ ವಿಷಯಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯಿಸಿ ಸ್ಥಳೀಯ ಚುನಾವಣೆಗಳ ಲಾಭಕ್ಕಾಗಿ ಗಡಿಯ ವಿವಾದಕ್ಕೆ ಪ್ರಚೋದನೆ ಮಾಡಲಾಗುತ್ತಿದೆ. ಮಹಾರಾಷ್ಟ್ರವು ಬೆಳಗಾವಿ ಸುದ್ದಿಗೆ ಬಂದರೆ ಸೊಲ್ಲಾಪೂರ ಮತ್ತು ಕೊಲ್ಲಾಪೂರ ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳುತ್ತೇವೆ ಎಂದರು. ಉತ್ತರ ಕರ್ನಾಟಕ ಪ್ರತ್ಯೇಕತೆ ವಿಚಾರಕ್ಕೆ ಸರ್ಕಾರವೇ ಕಾರಣವಾಗಿದೆ. ಇಲ್ಲಿ 9 ಕಚೇರಿಗಳನ್ನು ಪ್ರಾರಂಭಿಸಬೇಕಿತ್ತು ಮತ್ತು ಚಳಿಗಾಲ ಅಧಿವೇಶನ ನಡೆಸಬೇಕಿತ್ತು. ಅದನ್ನು ಸರ್ಕಾರ ಮಾಡದೇ ಇರುವುದು ಪ್ರತ್ಯೇಕತೆಯ ಕಾವಿಗೆ ಕಾರಣವಾಗಿದೆ. ಆದರೆ ಕರ್ನಾಟಕ ಯಾವಾಗಲೂ ಒಗ್ಗಟ್ಟಾಗಿಯೇ ಇರುತ್ತದೆ ಎಂದರು.
ರೈತ ಮುಖಂಡೆ ಜಯಶ್ರೀ ಗುರನ್ನವರ ಮಾತನಾಡಿ ರಾಜ್ಯದಲ್ಲಿ ಬಿಜೆಪಿ 25 ಜನ ಸಂಸದರಿದ್ದರೂ ಪ್ರಯೋಜನೆ ಇಲ್ಲದಂತಾಗಿದೆ. ಕೇವಲ ಮತಕ್ಕಾಗಿ ಬರುವ ಇವರಿಗೆ ರೈತರ ಸಮಸ್ಯೆ ಮತ್ತು ನೀರಿನ ಸಮಸ್ಯೆಯ ಬಗ್ಗೆ ಅರಿವಿಲ್ಲದಂತಾಗಿದೆ ಮಹದಾಯಿ ಹೋರಾಟಕ್ಕೆ ವರ್ಷಗಳೆ ಕಳೆದಿವೆ ಸಂಸದರು ಇನ್ನಾದರೂ ಪ್ರಧಾನಿ ಗಮನಕ್ಕೆ ತರಲಿ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ರೈತ ಮುಖಂಡ ಚೂನಪ್ಪಾ ಪೂಜಾರಿ, ಪ್ರಕಾಶ ನಾಯಕ್, ಸೋಮು ರೈನಾಪೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.