ಬೆಂಗಳೂರು: ಸಂಪೂರ್ಣ ಸಾಲ ಮನ್ನಾ ಹಾಗೂ ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಹುಬ್ಬಳ್ಳಿಯಿಂದ ನೂರಾರು ರೈತರು ಬೆಂಗಳೂರಿಗೆ ಆಗಮಿಸಿದ್ದಾರೆ.
ಈಗಾಗಲೇ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ ತಲುಪಿರುವ ರೈತರು ಫ್ರೀಡಂ ಪಾರ್ಕ್ ವರೆಗೂ ಪ್ರತಿಭಟನಾ ರ್ಯಾಲಿಯನ್ನು ನಡೆಸಲಿದ್ದಾರೆ. ಫ್ರೀಡಂ ಪಾರ್ಕ್ ತಲುಪಿದ ಬಳಿಕ ಮಹದಾಯಿ, ಕಳಸಾ ಬಂಡೂರಿ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೆಂಗಳೂರು ಚಲೋ ಹಮ್ಮಿಕೊಂಡು ವಿಧಾನಸೌಧ ತಲುಪಲಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲಿದ್ದಾರೆ. ಮೊದಲಿಗೆ ಫ್ರೀಡಂ ಪಾರ್ಕ್ ನಲ್ಲಿಯೇ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಅನ್ನದಾತರ ಮನವಿಯನ್ನು ಸ್ವೀಕರಿಸಲಿದ್ದಾರೆ.
ನವಲಗುಂದ, ನರಗುಂದ, ರೋಣ, ಗದಗ, ಸವದತ್ತಿ, ಹಾವೇರಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಮುಂಡರಗಿ, ಬದಾಮಿ ಮತ್ತು ಗಜೇಂದ್ರಘಢ ತಾಲೂಕುಗಳಿಂದ ಹೋರಾಟಗಾರರು ಬೆಂಗಳೂರು ಮಹಾನಗರಕ್ಕೆ ಆಗಮಿಸಿದ್ದಾರೆ.