Connect with us

Latest

ಮಹಾ ಮೈತ್ರಿಯಲ್ಲೂ ಅಜಿತ್ ಪವಾರ್‌ಗೆ ಡಿಸಿಎಂ ಪಟ್ಟ ಸಾಧ್ಯತೆ

Published

on

– ಸಹೋದರನನ್ನು ಅಪ್ಪಿ ಸ್ವಾಗತಿಸಿದ ಸುಪ್ರಿಯಾ ಸುಳೆ

ಮುಂಬೈ: ಮಹಾರಾಷ್ಟ್ರ ರಾಜಕೀಯ ಡ್ರಾಮಾ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಎನ್‍ಸಿಪಿ ನಾಯಕ ಅಜಿತ್ ಪವಾರ್ ಡಿಸಿಎಂ ಹುದ್ದೆಗೆ ರಾಜಿನಾಮೆ ನೀಡಿ ಹೊರ ಬಂದ ಬೆನ್ನಲ್ಲೇ ಇದೀಗ ಮಹಾ ಮೈತ್ರಿ ಸರ್ಕಾರದಲ್ಲೂ ಉಪ ಮುಖ್ಯಮಂತ್ರಿ ಗದ್ದುಗೆಯನ್ನೇ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜಕೀಯ ಹೈ ಡ್ರಾಮಾ ನಂತರ ಶಿವ ಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಎಲ್ಲ ರೀತಿಯ ಸಿದ್ಧತೆಯನ್ನು ನಡೆಸಿದ್ದಾರೆ.

ಬಿಜೆಪಿ ಜೊತೆ ಕೈ ಜೋಡಿಸಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕುಟುಂಬ ಹಾಗೂ ಪಕ್ಷ ಒಡೆದು ಹೋಗಿದೆ ಎಂದು ಪೋಸ್ಟ್ ಮಾಡಿದ್ದ ಅಜಿತ್ ಪವಾರ್ ಸಹೋದರಿ ಸುಪ್ರಿಯಾ ಸುಳೆ ಸಹ ಅಜಿತ್ ಅವರನ್ನು ಅಪ್ಪಿಕೊಂಡಿದ್ದಾರೆ. ಶರದ್ ಪವಾರ್ ಕುಟುಂಬದಲ್ಲಿ ಎಲ್ಲವೂ ಸರಿಯಾಗಿದೆ ಎಂದು ತೋರಿಸಲು ಅಜಿತ್ ಪವಾರ್ ಮರಳಿ ಎನ್‍ಸಿಪಿ ಗೂಡಿಗೆ ಬರುತ್ತಿದ್ದಂತೆ ಅವರನ್ನು ತಬ್ಬಿಕೊಂಡು ಸ್ವಾಗತಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಮಹಾ ಮೈತ್ರಿಯಲ್ಲಿಯೂ ಸಹ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮಂಗಳವಾರವಷ್ಟೇ ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್ ನಾಯಕರು ‘ಮಹಾ ವಿಕಾಸ್ ಅಘಾಡಿ’ ಹೆಸರಿನಲ್ಲಿ ಮೈತ್ರಿ ಸರ್ಕಾರ ರಚಿಸಲು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಾರಿಯಾ ಬಳಿ ಅವಕಾಶ ಕೇಳಿದ್ದರು. ರಾಜ್ಯಪಾಲರು ಅವಕಾಶ ನೀಡಿದ ನಂತರ ಇದೀಗ ಸರ್ಕಾರ ರಚಿಸಲು ಎಲ್ಲ ರೀತಿಯ ಸಿದ್ಧತೆ ನಡೆಸಿದ್ದಾರೆ.

ಮಂಗಳವಾರವಾಷ್ಟೇ ಸುಪ್ರೀಂ ಕೋರ್ಟ್ ಬಿಜೆಪಿಯ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಎನ್‍ಸಿಪಿಯ ಸಜಿತ್ ಪವಾರ್ ಮೈತ್ರಿಗೆ 24 ಗಂಟೆಯೊಳಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿತ್ತು. ಆದೇಶದ ಬೆನ್ನಲ್ಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ದೇವೇಂದ್ರ ಫಡ್ನವಿಸ್ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ರಾಜೀನಾಮೆ ಸಲ್ಲಿಸಿದ್ದರು.

ಇಂದು ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ನಡೆಯುತ್ತಿದ್ದು, ಹಂಗಾಮಿ ಸ್ಪೀಕರ್ ಕಾಳಿದಾಸ್ ಕೋಲಂಬ್ಕರ್ ಅವರು ಶಾಸಕರಿಗೆ ಪ್ರಮಾಣ ಬೋಧಿಸಲಿದ್ದಾರೆ. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Click to comment

Leave a Reply

Your email address will not be published. Required fields are marked *